Monday, June 28, 2010

ಮಲೆನಾಡಿನ ಮಳೆಗಾಲದಲ್ಲೊಂದು ದಿನ

ತುಂಬಾ ದಿನಗಳ ನಂತರ ಮಳೆಯಲ್ಲಿ ಕೊಡೆ ಹಿಡಿದು ನಡೆಯುತ್ತಿದ್ದೆ. ಕಳೆದುಕೊಂಡ ಅಪೂರ್ವವಾದ ಕ್ಷಣಗಳನ್ನು ಮತ್ತೆ ಅನುಭವಿಸುತ್ತಿದ್ದೆ. ಕೊಡೆ ಮೇಲೆ ಮಳೆಹನಿ ಬಿದ್ದಾಗ ಹೊರಡುವ ಟಪ್ ಟಪ್ ಸದ್ದು, ಚಪ್ಪಲಿನಿಂದ ಹೊರಡುವ ಚೀಂವ್ ಚೀಂವ್ ಶಬ್ದ, ರಸ್ತೆ ಬದಿಯ ಕಿಸಗಾರ (ದಾಸವಾಳ) ಹಣ್ಣು ಕೀಳುವ ಖುಷಿ, ಇನ್ನೂ ಏನೇನೋ.......!
ಸತ್ಯ ಏನೆಂದರೆ ಕಳೆದುಕೊಳ್ಳುವವರೆಗೂ ಇವು ಅಪೂರ್ವವಾದುದೆಂದು ಅನ್ನಿಸಿರಲೇ ಇಲ್ಲ.
ನಾನು ಅನುಭವಿಸಿದ್ದನ್ನು ಹಂಚಿಕೊಳ್ಳುವ ಅನ್ನಿಸಿತು... ಕೆಲವು ಕ್ಷಣಗಳು ನಿಮಗಾಗಿ.







Thursday, June 17, 2010

ತಡೆಯಲಾಗದೆ.....

ನಿನ್ನೆ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಅಪ್ಪಯ್ಯನತ್ರ ಏನೋ ಹರಟೆ ಹೊಡೆಯುತ್ತಿದ್ದೆ. ಮೊಬೈಲಿಗೆ ಮತ್ಸರವಾಗಿರಬೇಕು, ಶಬ್ದ ಮಾಡತೊಡಗಿತು.

ಯಾರಪ್ಪಾ ಎಂದು ನೋಡಿದರೆ, ಮೈಸೂರಿನ ಪ್ರದೀಪ!. ಮದುವೆಗೆ ಕರೆದರೂ ಏನೋ ನೆವ ಹೇಳಿ ತಪ್ಪಿಸಿಕೊಂಡಿದ್ದವ ಇದ್ದಕ್ಕಿದ್ದಂತೆ ಫೋನ್ ಮಾಡಿದ್ದು ನೋಡಿ ಖುಷಿಯಾಯ್ತು. ರಿಸೀವ್ ಮಾಡಿ ಹಲೋ ಎಂದ ಮರು ಕ್ಷಣವೇ ಫೋನ್ ಕಟ್.

ವೊಡಾಪೋನಿಗೆ ಶಪಿಸುತ್ತಾ, ವಾಪಾಸ್ ಕಾಲ್ ಮಾಡಿದರೆ, ಫೋನ್ ಎತ್ತಿದವನೇ ಮೈಸೂರು ಸ್ಟೈಲಲ್ಲಿ "ಏನ್ ಮಗಾ, ಹೆಂಗಿದೀಯಾ? ತುಂಬಾ ದಿನದ ಮೇಲೆ ನನ್ನ ನೆನಪಾಯ್ತಾ? ಹೆಂಗಿದೆ ಹೊಸ ಲೈಫು? ಎಲ್ಲಿ ಮನೆ ಈಗ?" ಅಂತ ಒಂದೇ ಉಸಿರಲ್ಲಿ ಕೇಳಿದ. ನನಗಾಶ್ಚರ್ಯ!!, ಎಲಾ ಇವನಾ? ಇವನೇ ಫೋನ್ ಮಾಡಿ, ಹಿಂಗೆಲ್ಲಾ ಕೇಳ್ತಾನಲ್ಲಾ.

"ಮಗನೇ, ನೀನೇ ನನಗೆ ಪೋನ್ ಮಾಡಿದ್ಯಲ್ಲೋ ಈಗ?"
"ಹೌದಾ?, ಈಗಲಾ?"
"ಹಮ್ ಈಗಲೇ. ಸ್ಪೀಡ್ ಡಯಲ್ಲೋ ಏನೋ ಪ್ರೆಸ್ ಆಗಿರಬೇಕು, ಅದಿರಲಿ ನೀನು ಹೇಗಿದೀಯಾ?"
"ಹೇ, ಇರೋ ಚೆಕ್ ಮಾಡ್ತೀನಿ" ಅಂದವನು ಅರ್ಧ ನಿಮಿಷ ಬಿಟ್ಟು, "ಗುರೂ ಫೋನ್ ಹುಡುಕ್ತಾ ಇದೀನಿ ಕಣೋ ಸಿಗ್ತಾ ಇಲ್ಲಾ ತಲೆ ಕೆಟ್ಟೋಗ್ತಿದೆ, ನಿಂಗೆ ನಾಳೆ ಕಾಲ್ ಮಾಡ್ತೀನಿ" ಅಂದವನೇ ಫೋನ್ ಕಟ್ ಮಾಡಿದ.