Friday, October 01, 2010

Ayodhya Verdict 2 - ಯಾರಿಗೆ ಎಲ್ಲೆಲ್ಲಿ

Reference: Vol21(Page no. 5079 -5081) , from Justice Sudhir Agarwal's Judgment

Place in which Ramalalla's Statue is present and it is a birth place of Bhagavan Rama. It will be for Bhagavan Ram and cannot be obstructed or interfered.

Place belongs to both Hindus and Muslims

Place belongs to Nirmohi Akhara

Place belongs to both Hindus and Nirmohi Akhara


Honorable Judge also mentioned that
"It is however made clear that the share of muslim parties shall not be less than one third (1/3) of the total area of the premises and if necessary it may be given some area of outer courtyard. It is also made clear that while making partition by metes and bounds, if some minor adjustments are to be made with respect to the share of different parties, the affected party may be compensated by allotting the requisite land from the area which is under acquisition of the Government of India."





Ayodhya Verdict - 1

A sketch which is in Hon'ble Sibghat Ullah Khan's judgment at page number 14.



Tuesday, August 24, 2010

ನಾವು(ನು) ಜಾಗೃತವಾಗುವುದೆಂದು???!!!!

ಪವಿತ್ರ ರಂಜಾನ್ ನ ಈ ಸಂದರ್ಭದಲ್ಲಿ ಎಲ್ಲ ಮುಸ್ಲೀಂ ಬಾಂಧವರಿಗೂ ಶುಭಕಾಮನೆಗಳು.

ಕಳೆದ ವಾರ ಊರಿಗೆ ಖಾಸಗಿ ಬಸ್ಸಿನಲ್ಲಿ ಹೊರಟಿದ್ದೆ, ಮುಂಜಾನೆ ೬ ಗಂಟೆ ಹೊತ್ತಿಗೆ ಬಸ್ಸು ಸಾಗರ ತಲುಪಿತು. ಸಾಗರ ಪೇಟೆ ದಾಟಿ, ಪಿಯು ಕಾಲೇಜಿನ ಸಮೀಪ ಬಸ್ಸು ಇದ್ದಕ್ಕಿದ್ದಂತೆ ನಿಂತಿತು. ಮೂವರು ಮುಸ್ಲೀಂ ಪುರುಷರು ಗಡಿಬಿಡಿಯಲ್ಲಿ ಬಸ್ಸು ಇಳಿದರು. ನಾನು ಭಯಮಿಶ್ರಿತ ಕುತೂಹಲದಿಂದ ನೋಡತೊಡಗಿದೆ. ಅವರು ಇಳಿದೊಡನೆ ಬಾಟಲಿನ ನೀರಿನಿಂದ ಕಾಲು ತೊಳೆದು, ತಾವು ತಂದಿದ್ದ ಚಾದರವನ್ನು ನೆಲಕ್ಕೆ ಹಾಸಿ ಪ್ರಾರ್ಥನೆ ಆರಂಭಿಸಿದರು. ಅವರ ಪ್ರಾರ್ಥನೆ ಹಾಗೆ ೧೦ ನಿಮಿಷದವರೆಗೂ ಮುಂದುವರೆದು ನಂತರ ಬಸ್ಸು ಹತ್ತಿ ತಮ್ಮ ಪಾಡಿಗೆ ತಾವು ಕುಳಿತರು.

ಇವಿಷ್ಟು ನಡೆದ ಘಟನೆ. ಕೆಲವರಿಗೆ ಇದು ಒಂದು ಸಹಜ ಘಟನೆ ಅನ್ನಿಸಬಹುದು, ಇನ್ನು ಕೆಲವರಿಗೆ ಇದು ಸಹಜ ಅಲ್ಲ ಅನ್ನಿಸಬಹುದು. ಇದು ಅವರವರು ಬೆಂಬಲಿಸುವ ರಾಜಕೀಯ ಪಕ್ಷವನ್ನು ಅವಲಂಬಿಸಿರಬಹುದು!!

ಈ ಘಟನೆ ನೋಡುತ್ತಿದ್ದಾಗ ಮತ್ತು ನಂತರ ನನ್ನಲ್ಲಾದ ಆಲೋಚನೆಗಳು ಮತ್ತು ಎದ್ದ ಪ್ರಶ್ನೆಗಳನ್ನು ಇಲ್ಲಿ ಅಕ್ಷರವಾಗಿಸಿದ್ದೇನಷ್ಟೆ.

ಅವರು ಪ್ರಾರ್ಥನೆ ಆರಂಬಿಸಿದ ಕೂಡಲೇ ನನಗೆ ಅನ್ನಿಸಿದ್ದು, ಈ ಘಟನೆಯ ಒಂದು ಫೋಟೊ ತೆಗೆದುಕೊಳ್ಳಬೇಕೆಂದೆನಿಸಿತು, ಕೂಡಲೇ ಮನಸ್ಸು ಅದರ ಪರಿಣಾಮದ ಬಗೆಗೆ ಯೋಚಿಸಿತು. ನಾನು ಫೋಟೊ ತೆಗೆಯುವುದಕ್ಕೆ ಅವರು ಪ್ರತಿಭಟಿಸಿದರೆ? ಪ್ರತಿಭಟಿಸದರೂ ಚಿಂತೆಯಿಲ್ಲ, ಆದರೆ ಬಸ್ಸಿನಲ್ಲಿದ್ದ ಉಳಿದವರು ನನ್ನ ಬೆಂಬಲಿಸದಿದ್ದರೆ? ಇದು ದೊಡ್ಡ ಕೋಮು ಗಲಭೆಗೆ ಕಾರಣವಾಗಿಬಿಟ್ಟರೆ? ಇಷ್ಟೆಲ್ಲ ಯೋಚಿಸಿ, ಫೋಟೊ ತೆಗೆಯುವ ವಿಚಾರ ಅಲ್ಲಿಗೇ ಬಿಟ್ಟೆ.
ಆಷ್ಟರಲ್ಲಿ ಅವರು ಪ್ರಾರ್ಥನೆ ಮುಗಿಸಿ ಬಸ್ಸೇರಿದರು. ಅವರು ಪ್ರಾರ್ಥಿಸಿದ್ದಕ್ಕೆ ನನಗೆ ಕಿಂಚಿತ್ತೂ ಬೇಸರವಿರಲಿಲ್ಲ, ಆದರೆ ಇದಕ್ಕೆ ಅವಕಾಶ ನೀಡಿದ ಬಸ್ಸಿನ ಸಿಬ್ಬಂದಿಗೆ ಒಂದು ಧನ್ಯವಾದ ಹೇಳಬಹುದಿತ್ತು ಅನ್ನಿಸದ್ದಂತೂ ನಿಜ.

ಒಂದೊಮ್ಮೆ ಒಬ್ಬ ಹಿಂದು ಸಂಧ್ಯ್ಯಾವಂದನೆ ಮಾಡಬೇಕು ೫ ನಿಮಿಷ ಬಸ್ಸು ನಿಲ್ಲಿಸಿ ಅಂತ ಕೇಳಿಕೊಂಡರೆ ಬಸ್ಸು ನಿಲ್ಲಿಸಿತ್ತಿದ್ದರೇ? ಒಂದೊಮ್ಮೆ ಬಸ್ಸಿನ ಸಿಬ್ಬಂದಿ ಅವಕಾಶ ನೀಡಿದರೂ, ಸಹಪ್ರಯಾಣಿಕರ ಪ್ರತಿಕ್ರಿಯೆ ಹೇಗಿರುತ್ತಿತ್ತು?
"ನಮಗೆ ಲೇಟ್ ಆಗುತ್ತೆ, ನಿನ್ನ ಪೂಜೆ ಮನೇಲಿ ಇಟ್ಕ"
"ನಿನ್ನೊಬ್ಬನಿಗಾಗಿ ನಾವೇಕೆ ಕಾಯಬೇಕು? ರೀ ಡ್ರೈವರ್, ನೀವೇಕೆ ಬಸ್ಸು ನಿಲ್ಲಿಸಿದ್ದು?"
.
.
.
ಅಂತ ತಲೆಗೊಬ್ಬರು ಮಾತನಾಡುತ್ತ್ತಿದ್ದರು.
ಗಮನಿಸಿ ಈ ತರಹದ ಪ್ರತಿಕ್ರಿಯೆ ನೀಡುವವರು ಅನ್ಯ ಧರ್ಮೀಯರಲ್ಲ, ಎಲ್ಲ ನಮ್ಮವರೇ.

ಹಾಗಾದರೆ, ಆ ಮುಸ್ಲೀಮರು ಪ್ರಾರ್ಥನೆ ಮಾಡುವಾಗ ನನ್ನೂ ಸೇರಿದಂತೆ ಎಲ್ಲರೂ ತುಟಿ ಪಿಟಕ್ಕೆನ್ನದೇ ಇದ್ದುದೇಕೆ? ಎಲ್ಲರಿಗೂ ಬಹುಶಃ ನನಗೆ ಅನಿಸಿದ ಹಾಗೆ ಅನಿಸಿರಬೇಕಲ್ಲವೇ?

ಅಂದರೆ ನಮ್ಮ ಸಮಾಜದಲ್ಲಿ ಎಂತ ವಾತಾವರಣ ಸೃಷ್ಟಿಯಾಗಿದೆ ಅಂದರೆ ಹಿಂದೂಗಳು ಏನೇ ಮಾಡಿದರೂ ಪ್ರತಿಭಟಿಸಬಹುದು, ಆದರೆ ಅಲ್ಪಸಂಖ್ಯಾತರೂ ಏನೇ ಮಾಡಿದರೂ ಪ್ರತಿಭಟಿಸುವಂತಿಲ್ಲ. ಇದಕ್ಕೆ ನಮ್ಮ ರಾಜಕೀಯ ಪಕ್ಷಗಳೂ ಸೇರಿದಂತೆ, ನಮ್ಮ ದೇಶದಲ್ಲಿರುವ ಕಾನೂನು ಮತ್ತು ಅಲ್ಪಸಂಖ್ಯಾತರಿಗಿರುವ ವಿಶೇಷ ಸವಲತ್ತುಗಳು ಕಾರಣ ಅನ್ನಿಸುತ್ತಿಲ್ಲವೆ? ನಮ್ಮ ದೇಶದಲ್ಲಿಯೇ ನಾವು ಭಯದಿಂದ ಜೀವಿಸಬೇಕೆ?

ರಾಜಕೀಯಪಕ್ಷಗಳ ಧೋರಣೆ ಗಮನಿಸಿದರೆ, ಒಂದು ಗಾದೆ ನೆನಪಿಗೆ ಬರುತ್ತೆ "ಮನೆಗೆ ಮಾರಿ, ಊರಿಗೆ ಉಪಕಾರಿ".

ನಾವು(ನು) ಜಾಗೃತವಾಗುವುದೆಂದು???!!!!


Thursday, July 29, 2010

ಟಾಯ್ಲಟ್ಟೋ? ರೆಸ್ಟ್ ರೂಮೋ?


ಇಂದಿನ "ನೂರೆಂಟು ಮಾತು" ಓದಿ, ನೆನಪಾಗಿದ್ದು ನನ್ನ ೨ ವರ್ಷದ ಹಿಂದಿನ ಒಂದು ಅನುಭವ.

ನನಗೂ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಮೊದಲು ಟಾಯ್ಲಟ್ಟಿಗೆ ರೆಸ್ಟ್ ರೂಂ ಅನ್ನುತ್ತಾರೆ ಎಂಬ ಕಲ್ಪನೆ ಇರಲಿಲ್ಲ. ಮೊದಲು ಆಶ್ಚರ್ಯವೆನಿಸಿ ನಂತರ ರೂಢಿ ಆಗಿತ್ತು.

ಒಮ್ಮೆ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಸೆಕ್ಯುರಿಟಿಯನ್ನು ರೆಸ್ಟ್ ರೂಮ್ ಎಲ್ಲಿದೆ ಅಂದೆ. ಅವನು ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡತೊಡಗಿದ. ನಂತರ ನೆನಪಾಗಿ ಟಾಯ್ಲೆಟ್ ಎಲ್ಲಿದೆ ಅಂದೆ. ಅವನಿಗೆ ನಗು ತಡೆದುಕೊಳ್ಳಲಾಗದೆ, "ಏನ್ರೀ, ಟಾಯ್ಲೆಟ್ ಗೆ ರೆಸ್ಟ್ ರೂಮ್ ಅಂತೀರಲ್ರೀ, ಅಲ್ಲೇನ್ರಿ ನೀವು ರೆಸ್ಟ್ ಮಾಡೋದು ಅಂದ". ನನಗೆ ನಾಚಿಕೆಯಾಗಿ "ಸರ್, ಎಲ್ಲಿದೆ ತೋರಿಸಿ" ಎಂದು ವಿನಯವಾಗಿ ಕೇಳಿದೆ. ಅವನು ಟಾಯ್ಲಟ್ ತೋರಿಸಿ, ಅಲ್ಲಿದ್ದ ಎಲ್ಲವರಿಗೂ ವಿಷಯ ಹೇಳಿ ನಗಲಾರಂಭಿಸಿದ. ನನಗೆ ಇನ್ನೂ ನಾಚಿಕೆಯಾಗಿ ಬೇಗ ನನ್ನ ಕಾರ್ಯ ಮುಗಿಸಿ ಹೊರಗೆ ಬಂದರೆ, ಅವನು ಜೋರಾಗಿ "ಇವ್ರೇ ನೋಡ್ರಿ, ರೆಸ್ಟ್ ರೂಮ್ ಕೇಳಿದವರು" ಅಂತ ಎಲ್ಲರಿಗೂ ನನ್ನ ತೋರಿಸಲಾರಂಭಿಸಿದ. ಎಲ್ಲರೂ ನನ್ನ ನೋಡಿ ಮುಸಿಮುಸಿ ನಗಲಾರಂಬಿಸಿದರು. ನನಗೆ ಅವಮಾನ ತಾಳಲಾಗದೇ ಅಲ್ಲಿಂದ ಜಾಗ ಖಾಲಿ ಮಾಡಿದೆ.

ನಮಗೆಷ್ಟು ಲೋಕ ಜ್ಞಾನವಿದ್ದರೂ, ವ್ಯವಹಾರ ಜ್ಞಾನವಿಲ್ಲದಿದ್ದರೆ ವ್ಯರ್ಥ.

Monday, June 28, 2010

ಮಲೆನಾಡಿನ ಮಳೆಗಾಲದಲ್ಲೊಂದು ದಿನ

ತುಂಬಾ ದಿನಗಳ ನಂತರ ಮಳೆಯಲ್ಲಿ ಕೊಡೆ ಹಿಡಿದು ನಡೆಯುತ್ತಿದ್ದೆ. ಕಳೆದುಕೊಂಡ ಅಪೂರ್ವವಾದ ಕ್ಷಣಗಳನ್ನು ಮತ್ತೆ ಅನುಭವಿಸುತ್ತಿದ್ದೆ. ಕೊಡೆ ಮೇಲೆ ಮಳೆಹನಿ ಬಿದ್ದಾಗ ಹೊರಡುವ ಟಪ್ ಟಪ್ ಸದ್ದು, ಚಪ್ಪಲಿನಿಂದ ಹೊರಡುವ ಚೀಂವ್ ಚೀಂವ್ ಶಬ್ದ, ರಸ್ತೆ ಬದಿಯ ಕಿಸಗಾರ (ದಾಸವಾಳ) ಹಣ್ಣು ಕೀಳುವ ಖುಷಿ, ಇನ್ನೂ ಏನೇನೋ.......!
ಸತ್ಯ ಏನೆಂದರೆ ಕಳೆದುಕೊಳ್ಳುವವರೆಗೂ ಇವು ಅಪೂರ್ವವಾದುದೆಂದು ಅನ್ನಿಸಿರಲೇ ಇಲ್ಲ.
ನಾನು ಅನುಭವಿಸಿದ್ದನ್ನು ಹಂಚಿಕೊಳ್ಳುವ ಅನ್ನಿಸಿತು... ಕೆಲವು ಕ್ಷಣಗಳು ನಿಮಗಾಗಿ.







Thursday, June 17, 2010

ತಡೆಯಲಾಗದೆ.....

ನಿನ್ನೆ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಅಪ್ಪಯ್ಯನತ್ರ ಏನೋ ಹರಟೆ ಹೊಡೆಯುತ್ತಿದ್ದೆ. ಮೊಬೈಲಿಗೆ ಮತ್ಸರವಾಗಿರಬೇಕು, ಶಬ್ದ ಮಾಡತೊಡಗಿತು.

ಯಾರಪ್ಪಾ ಎಂದು ನೋಡಿದರೆ, ಮೈಸೂರಿನ ಪ್ರದೀಪ!. ಮದುವೆಗೆ ಕರೆದರೂ ಏನೋ ನೆವ ಹೇಳಿ ತಪ್ಪಿಸಿಕೊಂಡಿದ್ದವ ಇದ್ದಕ್ಕಿದ್ದಂತೆ ಫೋನ್ ಮಾಡಿದ್ದು ನೋಡಿ ಖುಷಿಯಾಯ್ತು. ರಿಸೀವ್ ಮಾಡಿ ಹಲೋ ಎಂದ ಮರು ಕ್ಷಣವೇ ಫೋನ್ ಕಟ್.

ವೊಡಾಪೋನಿಗೆ ಶಪಿಸುತ್ತಾ, ವಾಪಾಸ್ ಕಾಲ್ ಮಾಡಿದರೆ, ಫೋನ್ ಎತ್ತಿದವನೇ ಮೈಸೂರು ಸ್ಟೈಲಲ್ಲಿ "ಏನ್ ಮಗಾ, ಹೆಂಗಿದೀಯಾ? ತುಂಬಾ ದಿನದ ಮೇಲೆ ನನ್ನ ನೆನಪಾಯ್ತಾ? ಹೆಂಗಿದೆ ಹೊಸ ಲೈಫು? ಎಲ್ಲಿ ಮನೆ ಈಗ?" ಅಂತ ಒಂದೇ ಉಸಿರಲ್ಲಿ ಕೇಳಿದ. ನನಗಾಶ್ಚರ್ಯ!!, ಎಲಾ ಇವನಾ? ಇವನೇ ಫೋನ್ ಮಾಡಿ, ಹಿಂಗೆಲ್ಲಾ ಕೇಳ್ತಾನಲ್ಲಾ.

"ಮಗನೇ, ನೀನೇ ನನಗೆ ಪೋನ್ ಮಾಡಿದ್ಯಲ್ಲೋ ಈಗ?"
"ಹೌದಾ?, ಈಗಲಾ?"
"ಹಮ್ ಈಗಲೇ. ಸ್ಪೀಡ್ ಡಯಲ್ಲೋ ಏನೋ ಪ್ರೆಸ್ ಆಗಿರಬೇಕು, ಅದಿರಲಿ ನೀನು ಹೇಗಿದೀಯಾ?"
"ಹೇ, ಇರೋ ಚೆಕ್ ಮಾಡ್ತೀನಿ" ಅಂದವನು ಅರ್ಧ ನಿಮಿಷ ಬಿಟ್ಟು, "ಗುರೂ ಫೋನ್ ಹುಡುಕ್ತಾ ಇದೀನಿ ಕಣೋ ಸಿಗ್ತಾ ಇಲ್ಲಾ ತಲೆ ಕೆಟ್ಟೋಗ್ತಿದೆ, ನಿಂಗೆ ನಾಳೆ ಕಾಲ್ ಮಾಡ್ತೀನಿ" ಅಂದವನೇ ಫೋನ್ ಕಟ್ ಮಾಡಿದ.


Saturday, May 23, 2009

ಮದ್ದು - ಮರೆಯುವ ಮುನ್ನ

ಇದನ್ನು ಕೇವಲ ಮಾಹಿತಿಗಾಗಿ ಮಾತ್ರ ಬರೆಯುತ್ತಿದ್ದೇನೆ. ಇದನ್ನು ಬೇರೆ ಯಾವುದೇ ಸಂಕುಚಿತ ದೃಷ್ಟಿಕೋನದಿಂದ ಓದದಿರಿ.

ಸುಮಾರು ೨೦ - ೩೦ ವರ್ಷಗಳ ಹಿಂದೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಒಂದು ವಿಚಿತ್ರ ಗುಮಾನಿ ಇತ್ತು.ಅದೇನೆಂದರೆ ಅಲ್ಲಿಯ ಬ್ರಾಹ್ಮಣರ ಮನೆಗಳಲ್ಲಿ ಬ್ರಾಹ್ಮಣೇತರರು ಊಟ ಮಾಡಿದರೆ ಅವರಿಗೆ ಊಟದಲ್ಲಿ ಮದ್ದು ಬೆರೆಸಿ ಕೊಡುತ್ತಾರೆ ಎಂದು. ಇಲ್ಲಿ ಮದ್ದು ಎಂದರೆ ಖಾಯಿಲೆ ಗುಣಪಡಿಸುವ ಔಷಧ ಅಲ್ಲ ಬದಲಾಗಿ ಆರೋಗ್ಯ ಕೆಡಿಸುವ ಪದಾರ್ಥ ಎಂಬರ್ಥದಲ್ಲಿ ಬಳಸಲಾಗುತ್ತದೆ.

ಈ ಗುಮಾನಿ ಹೇಗೆ ಪ್ರಾರಂಭವಾಯಿತೆಂದು ಖಚಿತವಾದ ಮಾಹಿತಿ ಇಲ್ಲದಿದ್ದರೂ, ತಮ್ಮ ಮನೆಯ ಆಳುಗಳು ಬೇರೆಯವರ ಮನೆಯ ಕೆಲಸಕ್ಕೆ ಹೋಗಬಾರದೆಂದು ಹೇಳಿದ ಒಂದು ಸುಳ್ಳು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಅಂತ ಅನ್ನಿಸುತ್ತೆ. ಇದು ಎಷ್ಟು ತೀವ್ರವಾಗಿತ್ತೆಂದರೆ, ಎಂಥ ನಂಬಿಗಸ್ಥರಾದರೂ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಲು ಹಿಂಜರಿಯುತ್ತಿದ್ದರು. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೂ ಮೊದಲು ಕೇಳುತ್ತಿದ್ದುದು "ಯಾರ ಮನೆಯಲ್ಲಿ ಊಟ ಮಾಡಿದ್ದೆ?" ಎಂದು. ಚಿಕ್ಕ ಜ್ವರ, ಮೈ ಕೈ ನೋವು ಗಳಿಗೂ ಬ್ರಾಹ್ಮಣರ ಮನೆಯ ಮದ್ದೇ ಕಾರಣ ಅಂತ ಜನ ನಂಬುತ್ತಿದ್ದರು ಮತ್ತು ಈ ಮದ್ದನ್ನು ಕಕ್ಕಿಸಿದರೆ ಮಾತ್ರ ವ್ಯಕ್ತಿ ಸರಿಹೋಗುತ್ತಾನೆ ಅಂತ ಜನರ ನಂಬಿಕೆ. ಈ ಕೆಲಸಕ್ಕಾಗಿಯೇ ಅನೇಕ ಮದ್ದು ಕಕ್ಕಿಸುವ ಬೈದಿಗಳು ಹುಟ್ಟಿಕೊಂಡಿದ್ದರು. ಬೈದಿ ರೋಗಿಯನ್ನು ಒಂದು ದಿನ ತಮ್ಮಲ್ಲುಳಿಸಿಕೊಂಡು ಏನೇನೋ ಕುಡಿಯಲು ಕೊಟ್ಟು ವಾಂತಿ ಮಾಡಿಸಿ, ವಾಂತಿಯಲ್ಲಿ ಏನೋ ಒಂದು ಗಟ್ಟಿ ವಸ್ತುವನ್ನು ತೋರಿಸಿ ಮದ್ದು ತೆಗೆದಿದ್ದೇನೆ ಅಂತ ಹೇಳಿ ಕಳುಹಿಸುತ್ತಿದ್ದರು.

ಒಮ್ಮೆ ನಮ್ಮ ಊರಿನಲ್ಲೊಬ್ಬ ಹಿರಿಯರು ಇಂತಹ ಆರೋಪ ಎದುರಿಸಬೇಕಾಗಿ ಬಂದಿತ್ತು. ಅವರು ಎಷ್ಟು ಪರಿಪರಿಯಾಗಿ ತಿಳಿ ಹೇಳಿದರೂ ಊರವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ, ಏಕೆಂದರೆ ಅವರಾಗಲೇ ಬೈದಿ ಕಕ್ಕಿಸಿದ ಮದ್ದನ್ನು ನೋಡಿದ್ದರು. ನಂತರ ಎಲ್ಲ ಸೇರಿ ಬೈದಿಯನ್ನು ಪರೀಕ್ಷೆ ಮಾಡುವುದು ಅಂದ ತೀರ್ಮಾನಿಸಿ, ಆರೋಗ್ಯವಾಗಿದ್ದ ವ್ಯಕ್ತಿಯಿಂದಲೂ ಆ ಬೈದಿ ಮದ್ದು ಕಕ್ಕಿಸಿದ್ದನ್ನು ನೋಡಿದಾಗಲೂ ಕೆಲವು ಜನ ಪೂರ್ತಿಯಾಗಿ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.


ಸಮಾಧಾನದ ಸಂಗತಿಯೆಂದರೆ, ಕ್ರಮೇಣ ಕಡಿಮೆಯಾಗುತ್ತಾ ಬಂದ ಈ ಗುಮಾನಿ ಈಗ ಸಂಪೂರ್ಣವಾಗಿ ನಶಿಸಿ ಹೋಗಿದೆ ಎನ್ನಬಹುದು.

Friday, May 22, 2009

ಮರು ನಾಮಕರಣ

ನಾನು ಬ್ಲಾಗ್ ಲೋಕಕ್ಕೆ ಪಾದಾರ್ಪಣೆ ಮಾಡಿ ಸುಮಾರು ಎರಡುವರೆ ವರ್ಷವಾದರೂ, ಬರೆದಿದ್ದು ಮಾತ್ರ ಅತ್ಯಲ್ಪ. ನಂತರ ಕೆಲಸದ ಒತ್ತಡವೋ, ಆಲಸ್ಯವೋ, ನಿರ್ಲಕ್ಷ್ಯವೋ ಗೊತ್ತಿಲ್ಲ ಬರೆವಣಿಗೆ ನಿಲ್ಲಿಸಿ ಸುಮಾರು ಎರಡು ವರ್ಷ ಆಯ್ತು. ಶ್ರೀನಿಧಿ ಸಿಕ್ಕಿದಾಗಲೆಲ್ಲ ಬ್ಲಾಗ್ ಯಾವಾಗ ಬರೀತೆ? ಅಂತಾ ಕೇಳ್ತಾನೆ ಇದ್ದ. ಕಳೆದ ಬಾರಿ ಸಿಕ್ಕಾಗ ಮೇ ಮುಗಿಯುವುದರ ಒಳಗೆ ಬರೆಯುತ್ತೇನೆಂದು ವಾಗ್ದಾನ ಮಾಡಿದ್ದೆ. ಅದರಂತೆ ಈಗ ಮತ್ತೆ ಬರೆಯಲೇ ಬೇಕೆಂದು ಧೃಡ ನಿರ್ಧಾರ ಮಾಡಿದ್ದೇನೆ. ತುಂಬಾ ದಿನ ಬರೆಯುತ್ತಲೇ ಇರಬೇಕೆಂದು ಅಂದುಕೊಂಡಿದ್ದೇನೆ ಕೂಡ.

ಈ ಸಮಯದಲ್ಲಿ ಬಂದ ಇನ್ನೊಂದು ಆಲೋಚನೆ ಅಂದರೆ, ಈ ಬ್ಲಾಗ್ ನ ಮರು ನಾಮಕರಣ.
ಶುರುಮಾಡಿದಾಗ ಇದಕ್ಕೆ "ಕನ್ನಡದ ಕಂದ" ಅಂತ ಹೆಸರು ಇಟ್ಟಿದ್ದೆ, ಈಗ ಇದರ ಕೊಂಡಿಯನ್ನು ಹಾಗೇ ಉಳಿಸಿಕೊಂಡು ಬ್ಲಾಗ್ ನ ಹೆಸರು ಮಾತ್ರ "ಬೆಳಕಿಂಡಿ" ಎಂದು ಬದಲಾಯಿಸಿ ಪ್ರಾರಂಭಿಸುತ್ತಿದ್ದೇನೆ.
ನಿಮ್ಮೆಲ್ಲರ ಸಲಹೆ, ಸಹಕಾರ, ಕೋಪ, ಮಾರ್ಗದರ್ಶನ ಸದಾ ನನ್ನ ಮೇಲಿರಲಿ.

ಪ್ರೀತಿಯ
ಗುಹೆ