Saturday, May 23, 2009

ಮದ್ದು - ಮರೆಯುವ ಮುನ್ನ

ಇದನ್ನು ಕೇವಲ ಮಾಹಿತಿಗಾಗಿ ಮಾತ್ರ ಬರೆಯುತ್ತಿದ್ದೇನೆ. ಇದನ್ನು ಬೇರೆ ಯಾವುದೇ ಸಂಕುಚಿತ ದೃಷ್ಟಿಕೋನದಿಂದ ಓದದಿರಿ.

ಸುಮಾರು ೨೦ - ೩೦ ವರ್ಷಗಳ ಹಿಂದೆ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಒಂದು ವಿಚಿತ್ರ ಗುಮಾನಿ ಇತ್ತು.ಅದೇನೆಂದರೆ ಅಲ್ಲಿಯ ಬ್ರಾಹ್ಮಣರ ಮನೆಗಳಲ್ಲಿ ಬ್ರಾಹ್ಮಣೇತರರು ಊಟ ಮಾಡಿದರೆ ಅವರಿಗೆ ಊಟದಲ್ಲಿ ಮದ್ದು ಬೆರೆಸಿ ಕೊಡುತ್ತಾರೆ ಎಂದು. ಇಲ್ಲಿ ಮದ್ದು ಎಂದರೆ ಖಾಯಿಲೆ ಗುಣಪಡಿಸುವ ಔಷಧ ಅಲ್ಲ ಬದಲಾಗಿ ಆರೋಗ್ಯ ಕೆಡಿಸುವ ಪದಾರ್ಥ ಎಂಬರ್ಥದಲ್ಲಿ ಬಳಸಲಾಗುತ್ತದೆ.

ಈ ಗುಮಾನಿ ಹೇಗೆ ಪ್ರಾರಂಭವಾಯಿತೆಂದು ಖಚಿತವಾದ ಮಾಹಿತಿ ಇಲ್ಲದಿದ್ದರೂ, ತಮ್ಮ ಮನೆಯ ಆಳುಗಳು ಬೇರೆಯವರ ಮನೆಯ ಕೆಲಸಕ್ಕೆ ಹೋಗಬಾರದೆಂದು ಹೇಳಿದ ಒಂದು ಸುಳ್ಳು ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಅಂತ ಅನ್ನಿಸುತ್ತೆ. ಇದು ಎಷ್ಟು ತೀವ್ರವಾಗಿತ್ತೆಂದರೆ, ಎಂಥ ನಂಬಿಗಸ್ಥರಾದರೂ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಲು ಹಿಂಜರಿಯುತ್ತಿದ್ದರು. ಯಾರಿಗಾದರೂ ಆರೋಗ್ಯದಲ್ಲಿ ಏರುಪೇರಾದರೂ ಮೊದಲು ಕೇಳುತ್ತಿದ್ದುದು "ಯಾರ ಮನೆಯಲ್ಲಿ ಊಟ ಮಾಡಿದ್ದೆ?" ಎಂದು. ಚಿಕ್ಕ ಜ್ವರ, ಮೈ ಕೈ ನೋವು ಗಳಿಗೂ ಬ್ರಾಹ್ಮಣರ ಮನೆಯ ಮದ್ದೇ ಕಾರಣ ಅಂತ ಜನ ನಂಬುತ್ತಿದ್ದರು ಮತ್ತು ಈ ಮದ್ದನ್ನು ಕಕ್ಕಿಸಿದರೆ ಮಾತ್ರ ವ್ಯಕ್ತಿ ಸರಿಹೋಗುತ್ತಾನೆ ಅಂತ ಜನರ ನಂಬಿಕೆ. ಈ ಕೆಲಸಕ್ಕಾಗಿಯೇ ಅನೇಕ ಮದ್ದು ಕಕ್ಕಿಸುವ ಬೈದಿಗಳು ಹುಟ್ಟಿಕೊಂಡಿದ್ದರು. ಬೈದಿ ರೋಗಿಯನ್ನು ಒಂದು ದಿನ ತಮ್ಮಲ್ಲುಳಿಸಿಕೊಂಡು ಏನೇನೋ ಕುಡಿಯಲು ಕೊಟ್ಟು ವಾಂತಿ ಮಾಡಿಸಿ, ವಾಂತಿಯಲ್ಲಿ ಏನೋ ಒಂದು ಗಟ್ಟಿ ವಸ್ತುವನ್ನು ತೋರಿಸಿ ಮದ್ದು ತೆಗೆದಿದ್ದೇನೆ ಅಂತ ಹೇಳಿ ಕಳುಹಿಸುತ್ತಿದ್ದರು.

ಒಮ್ಮೆ ನಮ್ಮ ಊರಿನಲ್ಲೊಬ್ಬ ಹಿರಿಯರು ಇಂತಹ ಆರೋಪ ಎದುರಿಸಬೇಕಾಗಿ ಬಂದಿತ್ತು. ಅವರು ಎಷ್ಟು ಪರಿಪರಿಯಾಗಿ ತಿಳಿ ಹೇಳಿದರೂ ಊರವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ, ಏಕೆಂದರೆ ಅವರಾಗಲೇ ಬೈದಿ ಕಕ್ಕಿಸಿದ ಮದ್ದನ್ನು ನೋಡಿದ್ದರು. ನಂತರ ಎಲ್ಲ ಸೇರಿ ಬೈದಿಯನ್ನು ಪರೀಕ್ಷೆ ಮಾಡುವುದು ಅಂದ ತೀರ್ಮಾನಿಸಿ, ಆರೋಗ್ಯವಾಗಿದ್ದ ವ್ಯಕ್ತಿಯಿಂದಲೂ ಆ ಬೈದಿ ಮದ್ದು ಕಕ್ಕಿಸಿದ್ದನ್ನು ನೋಡಿದಾಗಲೂ ಕೆಲವು ಜನ ಪೂರ್ತಿಯಾಗಿ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.


ಸಮಾಧಾನದ ಸಂಗತಿಯೆಂದರೆ, ಕ್ರಮೇಣ ಕಡಿಮೆಯಾಗುತ್ತಾ ಬಂದ ಈ ಗುಮಾನಿ ಈಗ ಸಂಪೂರ್ಣವಾಗಿ ನಶಿಸಿ ಹೋಗಿದೆ ಎನ್ನಬಹುದು.

No comments: