Wednesday, May 09, 2007

ಉತ್ಸವ - ಉಸ್ತವ

ಆಗಷ್ಟೇ ಹೈಸ್ಕೂಲಿನ ಓದು ಮುಗಿಸಿ ಭಟ್ಕಳದ ಸುಧೀಂದ್ರ ಕಾಲೇಜ್ ಸೇರಿದ್ದೆ. ಹೈಸ್ಕೂಲಿನ ಖಾಕಿ ಚಡ್ಡಿ ಬಿಳಿ ಅಂಗಿ ಸಮವಸ್ತ್ರದಿಂದ ಮುಕ್ತಿ ಹೊಂದಿ ಬಣ್ಣ ಬಣ್ಣದ ಪ್ಯಾಂಟು ಶರ್ಟ್ ಧರಿಸಲು ಶುರು ಮಾಡಿದ್ದೆ. ಮನೆಯಿಂದ ಕಾಲೇಜಿಗೆ 15 ನಿಮಿಷ ಬಸ್ಸಿನಲ್ಲಿ ಪ್ರಯಾಣ. ಆಗಲೇ ನಮ್ಮ ಊರಲ್ಲಿ ಒಂದೆರಡು ಹೆಣ್ಣು ಬಸ್ಸುಗಳಿದ್ದವು. ಆ ಬಸ್ಸಿನ ಮುಂದಿನ ಬಾಗಿಲಲ್ಲಿ ಜೋತಾಡಿಕೊಂಡು, ಹತ್ತಿ ಇಳಿಯುವವರಿಗೆ ಅನುವು ಮಾಡಿಕೊಟ್ಟು ಹೋಗುವುದರಲ್ಲೇ ಏನೋ ಖುಷಿ.



ನಾನು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ, ಕಾಲೇಜಿನ ಯಾವ ಪಾಠಗಳೂ ತಲೆಗೆ ಹತ್ತುತ್ತಿರಲಿಲ್ಲ, ಎಲ್ಲ ಕ್ಲಾಸಿನಲ್ಲಿ ಮೂಕನ ಹಾಗೆ ಕುಳಿತಿರುತ್ತಿದ್ದೆ. ನಮ್ಮ ಮ್ಯಾತ್ಸ್ ಲೆಕ್ಚರರ್ ಹನುಮೇಶ ವೈದ್ಯ ಅವರು ಆಗಾಗ ಹೇಳುತ್ತಿದ್ದ "Pardon" ಶಬ್ದದ ಉಚ್ಚಾರ ಮತ್ತು ಅರ್ಥ ತಿಳಿದುಕೊಳ್ಳಲು ತಿಂಗಳುಗಳೇ ಆಗಿದ್ದವು. ಈ ಪರಿಸ್ಥಿತಿಯಲ್ಲಿ ನನಗೆ ಮಾತಾಡಲು ಅವಕಾಶ ಇದ್ದ ಕ್ಲಾಸ್ ಅಂದರೆ ಕನ್ನಡ ಕ್ಲಾಸ್. ಆದರೆ ಆ ಕಾಲೇಜಿನವರಿಗೂ ಕನ್ನಡ ಅಂದ್ರೆ ಅಸಡ್ಡೆ ಇರಬೇಕು. ಯಾವುದೋ ಮೀಸಲಾತಿಯಿಂದ ಆಯ್ಕೆಯಾದ ಒಬ್ಬ ಮೇಡಮ್ ಅವರನ್ನು ನೇಮಿಸಿದ್ದರು. ಅವರ ಉಚ್ಚಾರವೇ ಸರಿಯಿರಲಿಲ್ಲ. ಒಂದೆರಡು ಕ್ಲಾಸ್ ಸುಮ್ಮನಿದ್ದೆ. ಒಂದು ದಿನ ಅವರು "ಉಸ್ತವ" ಎಂದು ಉಚ್ಚರಿಸಿದಾಗ, ಎದ್ದು ನಿಂತು "ಮೇಡಮ್ ಅದು ಉಸ್ತವ ಅಲ್ಲ, ಅದನ್ನು ಉತ್ಸವ ಎಂದು ಉಚ್ಚರಿಸಬೇಕು" ಎಂದು ಹೇಳಿದೆ. ಅವರು ಒಪ್ಪಲೇ ಇಲ್ಲ. ನಂತರ ನಾನೇ ಬೋರ್ಡ್ ಮೇಲೆ "ಉಸ್ತವ" ಎಂದು ಬರೆದು "ಇದನ್ನು ಹೇಗೆ ಉಚ್ಚರಿಸುತ್ತೀರಾ?" ಅಂತ ಕೇಳಿದೆ. "ಉಸ್ತವ" ಅಂದರು. "ಹಾಗಾದರೆ ಇವೆರಡಕ್ಕೆ ವ್ಯತ್ಯಾಸ ಇಲ್ಲವಾ?" ಅಂತ ಕೇಳಿದೆ. ಅದಕ್ಕವರು ಉದಾಹರಣೆ ಸಮೇತ ಉತ್ತರ ನೀಡಲು ಆರಂಭಿಸಿದರು, ಬೋರ್ಡ್ ಮೇಲೆ "to" ಮತ್ತು "two" ಎಂದು ಬರೆದು ನನಗೆ ಉಚ್ಚರಿಸಲು ಹೇಳಿದರು. ನನಗೆ ನಿಜಕ್ಕೂ ಶಾಕ್ ಹೊಡೆದ ಹಾಗೆ ಆಯ್ತು, ಏನು ಹೇಳಬೇಕೆಂದು ತಿಳಿಯದೆ, ನನ್ನ ಜಾಗದಲ್ಲಿ ಹೋಗಿ ಕುಳಿತೆ. ಅವರು ನನ್ನ ಕಡೆ ವಿಜಯದ ನಗೆ ಬೀರುತ್ತಾ, ಎಲ್ಲರಿಗೂ ವಿವರಿಸಿ ಹೇಳತೊಡಗಿದರು. "ಇಂಗ್ಲಿಷಲ್ಲಿ ಸ್ಪೆಲ್ಲಿಂಗ್ ಮತ್ತು ಉಚ್ಚಾರ ಹೇಗೆ ಬೇರೆ ಬೇರೆ ಇರುತ್ತದೋ, ಹಾಗೆ ಕನ್ನಡದಲ್ಲಿ ಈ ಶಬ್ದ ಕೂಡ ಅದೇ ರೀತಿ.................".

ನಂತರ ಪರೀಕ್ಷೆಯಲ್ಲಿ "ಉತ್ಸವ(ಉಸ್ತವ ಎಂದು ಓದಬೇಕು)" ಅಂತ ಬರೆದು ಪ್ರತಿಭಟಿಸಿದ್ದೆ. ಅದನ್ನು ಓದಿ ಆ ಮೇಡಮ್ ಸಿಟ್ಟುಗೊಂಡು, ಕಾರಣ ಹೇಳದೇ ನನ್ನನ್ನು ಒಂದು ವಾರ ಕ್ಲಾಸಿನಿಂದ ಹೊರಗೆ ಹಾಕಿದ್ದರು.

2 comments:

ವಿ.ರಾ.ಹೆ. said...

ಹ್ಹ ಹ್ಹ. ಮಸ್ತ್ ಇದೆ.

ನನಗೂ ಇದೇ ರೀತಿ ಅನುಭವವಾಗಿತ್ತು.. ನನಗಾಗಿದ್ದು "ಹಂಪೆ" ಪದದಿಂದ. ಅವರು ಕೊಟ್ಟಿದ್ದು ಇಂಗ್ಲೀಷಿನ honour(ಆನರ್) ಪದದ ಉದಾಹರಣೆ.:-))
ಅದು ಬರೆಯುವಾಗ 'ಹಂಪೆ' ಎಂದು ಇದ್ದರೂ ಓದುವಾಗ 'ಅಂಪೆ' ಎಂದು ಓದಿದರೆ ಅದು ಸರಿಯೆನ್ನುವುದು ಅವರ ವಾದವಾಗಿತ್ತು.

Samarasa said...

nimma dairya mechha bekkade