Wednesday, April 04, 2007

ಕಾಪಿ ತರಿಸುತ್ತಿದ್ದ ಕೋಪ

ಶಾಲೆಗೆ ಹೋದವರು ಯಾರೂ ಕಾಪಿ ಬರೆಯುವ ಕೆಲಸದಿಂದ ತಪ್ಪಿಸಿಕೊಂಡವರು ಇರಲಿಕ್ಕಿಲ್ಲ. ನಾನು ನನ್ನ ಮನಸಾರೆ ಅದನ್ನ ದ್ವೇಷಿಸುತ್ತಿದ್ದೆ. ಅದರ ಪರಿಣಾಮವೇ ನನ್ನ ಕೋಳಿ ಕಾಲು ಗುಬ್ಬಿ ಕಾಲಿನಂತಹ ಅಕ್ಷರಗಳು. ನಮಗೆ ಎರಡು ಗೆರೆ ಪಟ್ಟಿಯಲ್ಲಿ ದಿನಕ್ಕೊಂದು ಪುಟ ಕನ್ನಡ ಕಾಪಿ ಬರೆಯಬೇಕಿತ್ತು. 12 ಸಾಲುಗಳಿರುವ ಸುಲೇಖ, ಲೇಖಕ್ ಪಟ್ಟಿಗಳನ್ನು ಬಿಟ್ಟು ಬರೀ 10 ಸಾಲು ಇರುವ ಬೇರೆ ಪಟ್ಟಿಯನ್ನೇ ಕೊಂಡು ತಂದು ಬರೆಯುತ್ತಿದ್ದೆ. ಒಂದೊಂದು ಸಾಲಿನಲ್ಲೂ ಕೇವಲ ಮೂರೇ ಮೂರು ಶಬ್ದ ಬರೆದು, ಕೊನೆಯ ಎರಡು ಸಾಲುಗಳನ್ನ ಸುಮ್ಮನೆ ಕಾಟು ಹೊಡೆದು ನನ್ನ ಕೋಪ ತೀರಿಸಿಕೊಳ್ಳುತ್ತಿದ್ದೆ.

ನಾನು ಅಜ್ಜಿಮನೆಯಲ್ಲಿ ಇದ್ದು ಶಾಲೆಗೆ ಹೋಗುತ್ತಿದ್ದೆ. ನನ್ನ ಚಿಕ್ಕಮ್ಮನೇ ನಂಗೆ ಟೀಚರ್. ಅದು ಏಕೋಪಾಧ್ಯಾಯ ಶಾಲೆ. ಒಂದೇ ಕೋಣೆ ನಾಲ್ಕು ಕ್ಲಾಸು. ಅವಳಿಗೆ ಎಲ್ಲರೂ ಬರೆದ ಕಾಪಿಯನ್ನು ನೋಡುವುದು ಕಷ್ಟವಾದ್ದರಿಂದ ನಮ್ಮ ಕ್ಲಾಸಿನ ಕಾಪಿ ಚೆಕ್ ಮಾಡುವ ಕೆಲಸ ನಂಗೆ ಕೊಟ್ಟಿದ್ದಳು. "ಕಳ್ಳನ ಕೈಯಲ್ಲಿ ಬೀಗ". ನಮ್ಮ ಕ್ಲಾಸಿನ ಎಲ್ಲರ ಕಾಪಿಯನ್ನು ಸ್ಟ್ರಿಕ್ಟ್ ಆಗಿ ಚೆಕ್ ಮಾಡ್ತಿದ್ದೆ ಆದರೆ ನಾನು ಮಾತ್ರ ಪ್ರಾಮಾಣಿಕವಾಗಿ ಕಾಪಿ ಬರೆಯುವುದನ್ನೇ ನಿಲ್ಲಿಸಿದೆ. ಸುಮಾರು ನಾಲ್ಕು ತಿಂಗಳು ಆರಾಮ ಆಗಿ ಕಾಪಿ ಬರೆಯದೆ ಕಳೆದೆ. ಒಂದು ದಿನ ಎಡ ಮಗ್ಗುಲಲ್ಲಿ ಎದ್ದಿದ್ದನೋ ಏನೋ? ಸಿಕ್ಕಿಬಿದ್ದೆ. ಮೊದಲನೆಯದಾಗಿ ದಾಸವಾಳ ಬಡ್ರು(ಕೋಲು) ಹುಡಿ ಆಯ್ತು, ಸಿದ್ದನ ಮನೆ ಕೃಷ್ಣನಿಂದ ನುಕ್ಕಿ ಬಡ್ರು ತರಿಸಿ ಅದರಿಂದ ಸೇವೆ ಆಯ್ತು, ಎಲ್ಲಾ ತರಹದ ಪೂಜೆ ಆದಮೇಲೆ ಅನುಭವಿಸಿದ್ದೇ ಪರಂಗಿಮಣೆ. ಪರಂಗಿಮಣೆ ಅಂದ್ರೆ ಒಂದು ತರಹದ ಶಿಕ್ಷೆ. ನಿಲ್ಲುವ ಮತ್ತು ಕುಳಿತುಕೊಳ್ಳುವುದರ ನಡುವಿನ ತ್ರಿಶಂಕು ಸ್ಥಿತಿ. ಯೋಗಾಸನದ ಭಾಷೆಯಲ್ಲಿ ಹೇಳುವುದಾದರೆ "ಪಾದದಿಂದ ಮೊಣಕಾಲು ಗಂಟಿನವರೆಗಿನ ಭಾಗ ಭೂಮಿಗೆ ಲಂಬವಾಗಿದ್ದು, ಮೊಣಕಾಲು ಗಂಟಿನಿಂದ ಸೊಂಟದವರೆಗಿನ ಭಾಗ ಭೂಮಿಗೆ ಸಮಾನಾಂತರವಾಗಿರಬೇಕು ಮತ್ತು ಸೊಂಟದಿಂದ ಮೇಲಿನ ಭಾಗ ಭೂಮಿಗೆ ಲಂಬವಾಗಿರಬೇಕು. " ಈ ಸ್ಥಿತಿಯಲ್ಲಿ ನಿಲ್ಲಿಸಿ ತೊಡೆಯ ಮೇಲೆ ಒಂದು ಪುಸ್ತಕ ಇಟ್ಟು, ಅದು ನೆಲಕ್ಕೆ ಬಿದ್ದರೆ ಮತ್ತೆ ಪೆಟ್ಟು. ಈ ಪರಂಗಿಮಣೆ ಶಿಕ್ಷೆಯನ್ನು ಎರಡು ತಾಸು ಅನುಭವಿಸಿ ಮನೆಗೆ ಹೋದರೆ ಅಲ್ಲಿ ಮತ್ತೆ ಅದೇ ಚಿಕ್ಕಮ್ಮ. ಬೆಳಿಗ್ಗೆ ಒಳಗೆ ನಾನು ಬಾಕಿ ಉಳಿಸಿದ ಸುಮಾರು 120 ಪುಟಗಳನ್ನು ಬರೆದು ಮುಗಿಸಬೇಕೆಂಬ ಆಜ್ಞೆ ಬೇರೆ. ಆಗ ನನ್ನ ಸಹಾಯಕ್ಕೆ ಬಂದಿದ್ದು ಅಜ್ಜಯ್ಯ. ಅಜ್ಜಯ್ಯನಿಗೆ ನನ್ನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ, ನಾನೇ ಅವನಿಗೆ ಮೊದಲ ಮೊಮ್ಮಗ. ಎಲ್ಲೋ ಹೊರಗೆ ಹೋಗಿದ್ದ ಅಜ್ಜಯ್ಯ ಬಂದ. ನನ್ನ ಅಳು ಸ್ವಲ್ಪ ಜಾಸ್ತಿ ಮಾಡಿದೆ. ಏನು ಎತ್ತ ಅಂತ ಎಲ್ಲಾ ವಿಚಾರಿಸಿ, ಚಿಕ್ಕಮ್ಮನ ತರಾಟೆ ತಗೊಂಡ ನಂಗೆ ಒಳಗೊಳಗೆ ಖುಷಿ. ಅವನದ್ದು ಒಂದೇ ಪ್ರಶ್ನೆ ಪುಸ್ತಕದಲ್ಲಿದ್ದುದನ್ನ ನಾನು ಯಾಕೆ ಮತ್ತೆ ಬರೀಬೇಕು ಅಂತ. ಹಾಗೂ ಹೀಗೂ ಸಂಧಾನ ಮಾಡಿ ಬಾಕಿಯನ್ನು ಒಂದು ವಾರದ ಒಳಗೆ ಬರೆಯಬೇಕೆಂದು ನಿರ್ಧಾರ ಆಯ್ತು.

ನಾಲ್ಕನೇ ಕ್ಲಾಸ್ ಮುಗಿಸಿ ಐದನೇ ಕ್ಲಾಸಿಗೆ ಬಂದರೆ ಇನ್ನು ಎರಡು ಕಾಪಿ(ಇಂಗ್ಲಿಷ್, ಹಿಂದಿ) ಹೆಚ್ಚು ಆಗಿತ್ತು. ಬೇಸಿಗೆ ಮತ್ತು ದಸರಾ ರಜೆಯಲ್ಲೂ ಕಾಪಿ ಬರೆಯಲು ಹೇಳುತ್ತಿದ್ದರು. ರಜೆಯ ಮೊದಲ ಎರಡು ದಿನ ಕುಳಿತು ಎಲ್ಲ ದಿನದ ಕಾಪಿ ಬರೆದು ಮುಗಿಸುತ್ತಿದ್ದೆ, ಇಲ್ಲಾ ಯಾರಿಗಾದರೂ outsource ಮಾಡುತ್ತಿದ್ದೆ. ಇದರ ಜೊತೆ ಮೊದಲಿನಿಂದ ಬರೆಯುತ್ತಿದ್ದ ಒಳ್ಳೆಯ ಕೆಲಸ. ದಿನಾಲು ಒಂದೊಂದು ಒಳ್ಳೆಯ ಕೆಲಸ ಬರೆಯಬೇಕಿತ್ತು. ನಾನು ಒಳ್ಳೆಯ ಕೆಲಸವನ್ನು ಹುಡುಕಿ ಬರೆಯುತ್ತಿದ್ದನೇ ಹೊರತು ಒಳ್ಳೆಯ ಕೆಲಸ ಮಾಡಿ ಬರೆಯುತ್ತಿದ್ದುದು ಕಡಿಮೆ. ಒಂದು ದಿನ "ಇಂದು ನಾನು ಯವುದೇ ಒಳ್ಳೆಯ ಕೆಲಸ ಮಾಡಲಿಲ್ಲ" ಎಂದು ಬರೆದುಕೊಂಡು ಹೋಗಿ ಬೈಸಿಕೊಂಡಮೇಲೆ ಇದರ ಒಳಗುಟ್ಟು ತಿಳಿದುಹೋಯ್ತು. ದಿನಾಲು ಹೊಸ ಹೊಸ ಒಳ್ಳೆಯ ಕೆಲಸ ಹುಡುಕಿ ಬರೆದುಕೊಂಡು ಹೋಗುವುದೇ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಯಾವುದು ಸಿಗದಿದ್ದರೆ ಹಿಂದಿನ ಪುಟಗಳನ್ನು ತಿರುವಿ, ಅದರಲ್ಲೇ ಒಂದನ್ನು ಆರಿಸಿ ಬರೆಯುತ್ತಿದ್ದೆ. ನನ್ನ ತಂಗಿಯಂತೂ ಯಾವಗಲೋ ಒಮ್ಮೆ ನಮ್ಮ ಅಜ್ಜಿಗೆ ಮರಿಗೆಯಿಂದ ಉಪ್ಪು ತಂದು ಕೊಟ್ಟಿದ್ದನ್ನು "ನಾನು ಇಂದು ಅಜ್ಜಿಗೆ ಉಪ್ಪು ತಂದು ಕೊಟ್ಟೆನು" ಎಂದು ಆಗಾಗ ಬರೆಯುತ್ತಿದ್ದಳು. ಒಂದು ದಿನ ಸುಬ್ಬಕ್ಕೋರು ನಿಮ್ಮ ಅಜ್ಜಿ ಇಷ್ಟೊಂದು ಉಪ್ಪನ್ನು ಏನು ಮಾಡ್ತಾರೆ ಅಂತ ಕೇಳಿದ್ದರು. ಅದಕ್ಕೆ ತಂಗಿ ನಾವು ದಿನಾಲು ಶಾಲೆಯಿಂದ ಮನೆಗೆ ಹೋದ ಮೇಲೆ ದೃಷ್ಟಿ ತೆಗಿತಾರೆ ಅಂತ ತಿರುಗಿ ಹೇಳಿದಾಗ ಸುಬ್ಬಕ್ಕೋರಿಗೆ ಏನು ಹೇಳಬೇಕೆಂದು ತಿಳಿದೇ ಸುಮ್ಮನಾಗಿದ್ದರು.

ಹೈಸ್ಕೂಲಿಗೆ ಹೋದಮೇಲೆ ತಿಗಡಿ ಮಾಸ್ತರರ ಹಿಂದಿ ಕಾಪಿ ಬರೆಯುವುದೇ ದೊಡ್ದ ತಲೆನೋವು ಆಗಿ ಹೋಗಿತ್ತು. ಮೊದಲೇ ಕಾಪಿ ಬರೆಯುವುದೆಂದರೆ ನಾನು ಹಿಂದೆ. ಆದರಲ್ಲೂ ಅದು ಹಿಂದಿ ಅಕ್ಷರ ಎಲ್ಲೆಲ್ಲೋ ಸುತ್ತಿ ಬಳಸಿ, ಮೇಲೆ ಒಂದು ಅಡ್ದ ಗೆರೆ ಹಾಕುವಷ್ಟರಲ್ಲಿ ಕೈಬೆರಳುಗಳ ಮೂಳೆಯೆಲ್ಲಾ ಮುರಿದ ಅನುಭವ. ಅದು ಒಂದು ಗೆರೆ ಪಟ್ಟಿಯಲ್ಲಿ ಬರೀಬೇಕು. 18 ರಿಂದ 20 ಸಾಲುಗಳು. ಇವರು ಸಹ ಪ್ರತಿದಿನ ನೋಡುತ್ತಿರಲಿಲ್ಲ, ನೋಡಿದ ದಿನ ಮಾತ್ರ ಆವತ್ತಿನ ದಿನಾಂಕ ಹಾಕಿ ತೋರಿಸುತ್ತಿದ್ದೆ. ಕಾಲೇಜಿಗೆ ಹೋದ ನಂತರ ನೋಟ್ಸ್ ಬರೆಯಲು ಉದಾಸೀನವಾಗಿ ಪಕ್ಕದವ ನೋಟ್ಸ್ ಬರೆಯುವಾಗ ಕಾರ್ಬನ್ ಇಟ್ಟು ಅಡಿಯಲ್ಲಿ ನನ್ನ ಪೇಪರ್ ಇಡುತ್ತಿದ್ದೆ.

ಕಾಪಿ ಬರೆಸುವ ಉದ್ದೇಶ ಸುಂದರವಾಗಿ ಬರೆಯಲು ಕಲಿಸುವುದು ಮಾತ್ರ ಆಗಿದ್ದರೆ ಈಗಂತೂ ಕಂಪ್ಯೂಟರ್ ಇರುವುದರಿಂದ ಅದರ ಅಗತ್ಯ ಇರಲಿಲ್ಲ. ಇದು ನಮ್ಮ ಭಾಷಾ ಜ್ಞಾನವನ್ನೂ ಹೆಚ್ಚಿಸುತ್ತದೆ. ಏನು ಮಾಡುವುದು ಕೆಟ್ಟ ಮೇಲೆ ........ ..........

10 comments:

Sandeepa said...

ಬಹಳ ಒಳ್ಳೇ ಬರಹ :)

keep it up!

ಗುಹೆ said...

@sandeep
thanks

Sushrutha Dodderi said...

ಸೂಪರ್! ತುಂಬಾ ಲಲಿತಮಯವಾಗಿದೆ. ನಗುವೋ ನಗು ಬಂತು.

ಹಾಂ, ಕೀಪಿಟಪ್ :)

ಶ್ರೀನಿಧಿ.ಡಿ.ಎಸ್ said...

ಗುರು,
ಚೊಲೋ ಬರದ್ಯೋ, ಹೀಂಗೇ ಬರೀತಾ ಇರು. ಸಹಜ ಲಾಲಿತ್ಯ ಇದ್ದು ಬರವಣಿಗೆಲಿ..

ಗುಹೆ said...

@ಶ್ರೀನಿಧಿ,ಸುಶ್ರುತ ,ಸಂದೀಪ

ಥಾಂಕ್ಸ್.. ನಿಮ್ಮ ಬರವಣಿಗೆ ನೋಡಿಯೇ ನಂಗೆ ಬರೆಯಬೇಕು ಅನಿಸಿದ್ದು..

Anonymous said...

hi..ನಾನು copy writing ದ್ವೇಷಿ ನನ್ನ ಕೆಟ್ಟ writing ನೋಡಿ ನಮ್ಮ missu ನಾನು ಅಂದವಾಗಿ ಬರೆಯುತ್ತೇನೆ ಅಂತ ವೊಂದು page ಬರ್ಕೊಬಾ ...ಅಂದರು. ನಾನೇನೋ ... neataಗೇ ಬರ್ಕೊಂಡ್ ಹೋಗಿದ್ದೆ goodಹಕ್ತಾರೆ ಅಂಕೊನ್ ಡೆ ಆದ್ರೆ ಆವ್ರು ಅಂದವಾಗಿ ಬರೆ ಅಂತ ಗೀಜಿ book ವಾಪಸ್ ಕೊಟ್ರೂ...

ನಿಮ್ಮ ಬರವಣಿಗೆಯ ತುಂಬಾ ಚೆನ್ನಾಗಿದೆ ಅನುಬವಗಳನ್ನು ಸ್ವಲ್ಪ genralise ಮಾಡಿ ಬರೀರಿ...

Anonymous said...

bahaLa chennagide.. sogasaagi mUDi bandide.. naanu kUDa copywriting dveshi.. 4 lined book nalli baresutidda dinagaLu nenasikonDare mai uriyutte..

Suma Udupa said...

Good writing!! Naanu kannada copy alli ondu saalinalli date, innondu saalinalli paatada hesaru heege 2-3 saalu waste maadi barita idde. Ondu sala idakkaagi pettu saha tindidde. Neevu baridaddu noodi adella nanapu aytu!! :)

Sanath said...

ಉಪ್ಪು ತಂದುಕೊಡುವ ಒಳ್ಳೆಯ ಕೆಲಸ ಓದಿ... ತುಂಬ ನಗು ಬಂತು..ನಾನು ಶಾಲೆಲಿ ಇದ್ದಾಗ ಒಂದು ಹೊಸ ಒಳ್ಳೆಯ ಕೆಲ್ಸ ಹುಡುಕಿ ಇಟ್ಟಿತ್ತಿದ್ದಿ .."ನಾನು ಶಾಲೆಯಲ್ಲಿ ನೀಡಿದ ಎಲ್ಲಾ ಮನೆಗೆಲಸ ವನ್ನ ಮುಗಿಸಿದ್ದೇನೆ "( ನಿಜವಾಗಿಯೂ ಮುಗಿಸದೇ ಇದ್ರೂವಾ!!!) ಅದನ್ನ ಕಾಪಿ ಪುಸ್ತಕ ಮನೆಲಿ ಬಿಟ್ಟೀಕಿ ಬಂದ್ಯೆ ಹೇಳಿ reason ಕೊಡೋವಾಗ proof ಆಗಿ ತೋರಿಸ್ತಿದ್ದಿ.

Madhu said...

ಇದು ಹುಡುಕು ನೋಡಿ
http://www.yanthram.com/kn/