Tuesday, May 15, 2007

ಮಗುವಿನ ಮುಗ್ಧತೆಗೆ ಸಾಕ್ಷಿ.

ಮಗುವಿನ ಮುಗ್ಧತೆಗೆ ಇನ್ನೆಲ್ಲಿಯ ಸಾಕ್ಷಿ ಬೇಕು ಅಲ್ವಾ?

Friday, May 11, 2007

ಮಲ ಪರೀಕ್ಷೆ.

ನಮ್ಮ ಊರು ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಒಂದು ಹಳ್ಳಿ. ಒಂದು ಕಡೆ ಭೋರ್ಗೆರೆಯುವ ಅರಬ್ಬೀ ಸಮುದ್ರ ಇನ್ನೊಂದು ಕಡೆ ಎದೆಯೆತ್ತಿ ನಿಂತಿರುವ ಪಶ್ಚಿಮ ಘಟ್ಟಗಳ ಸಾಲು. ಆ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಮೊದಲಿನಿಂದಲೂ ವಾಸಿಸುತ್ತಿರುವ ಒಂದು ಬುಡಕಟ್ಟು ಜನಾಂಗವಿದೆ. ಅರಣ್ಯ ಉತ್ಪನ್ನಗಳಾದ ಶ್ರೀಗಂಧ, ಬೆತ್ತ, ಹೆಗ್ಲಿ(ಅಣಬೆ, mashroom), ಕಣಾಲೆ(ಎಳೆ ಬಿದುರು) ಮುಂತಾದವುಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಾರೆ. ಅವರು ಮಾತನಾಡುವ ಭಾಷೆ ಮರಾಠಿಯಾದರೂ ಮೂಲ ಮರಾಠಿಗಿಂತ ತುಂಬಾ ಭಿನ್ನ. ಇವರು ತುಂಬಾ ಹಿಂದುಳಿದ ಜನಾಂಗವಾದ್ದರಿಂದ ಸ್ವಲ್ಪ ಪೆದ್ದುಪೆದ್ದಾಗಿ ವರ್ತಿಸುತ್ತಾರೆ. ಆದ್ದರಿಂದ ಅವರು ನಮ್ಮ ಹಾಸ್ಯಕ್ಕೆ ವಸ್ತುವಾಗಿದ್ದಾರೆ. ಊರಲ್ಲಿ ಯಾರಾದರೂ ಪೆದ್ದಾಗಿ ವರ್ತಿಸಿದಿರೆ "ನೀನೆಲ್ಲಿ ಮರಾಠಿ ಮಾರಾಯಾ?" ಅಂತ ಟೀಕಿಸುವುದು ಮಾಮೂಲು. ಒಟ್ಟಾರೆ ನಮ್ಮ ಊರಲ್ಲಿ "ಮರಾಠಿ" ಎನ್ನುವುದು ಪೆದ್ದ, ದಡ್ಡ ಪದಗಳಿಗೆ ಅನ್ವರ್ಥಕ ಪದ. ಈ ಮರಾಠಿಗಳು ಸುಮಾರಾಗಿ ಪೇಟೆಗೆ ಬರುವುದೇ ಸಂತೆ ನಡೆಯುವ ದಿನವಾದ ಭಾನುವಾರ. ತಾವು ತಂದ ವಸ್ತು ಮಾರಿ, ಅವಶ್ಯಕ ವಸ್ತುಗಳನ್ನು ಖರೀದಿಸಿ ಮರಳುತ್ತಾರೆ.

ಒಮ್ಮೆ ಸಂತೆಗೆ ಬಂದಿದ್ದ ಒಬ್ಬ ಮರಾಠಿಗೆ ಏನೋ ಆರೋಗ್ಯ ಸರಿ ಇರಲಿಲ್ಲ ಅಂತ ಡಾಕ್ಟರ್ ಬಳಿ ಹೋದ. ಆ ಡಾಕ್ಟರ್ ಮೂಲತಃ ನಮ್ಮ ಊರಿನವರೇ, ಎಲ್ಲರಿಗೂ ಸುಪರಿಚಿತರು. ಅವರ ಮನೆಯನ್ನೇ ಕ್ಲಿನಿಕ್ ಆಗಿಸಿಕೊಂಡಿದ್ದರು. ಫಸ್ಟ್ ಫ್ಲೋರಿನಲ್ಲಿ ಮನೆ, ಕೆಳಗಡೆ ಕ್ಲಿನಿಕ್. ಅವರು ಆಗಾಗ ತಮ್ಮ ಹತ್ತಿರ ಬರುವ ಮರಾಠಿಗಳಿಗೆ ಹೆಗ್ಲಿ ಮುಂತಾದವುಗಳನ್ನು ತಂದು ಕೊಡಲು ಹೇಳುತ್ತಿದ್ದರು.
ಆವತ್ತು ಆ ಮರಾಠಿಯನ್ನು ತಪಾಸಣೆ ಮಾಡಿ, "ನಿನ್ನ ಮಲ ಪರೀಕ್ಷೆ ಮಾಡಬೇಕು, ಮುಂದಿನವಾರ ಬರುವಾಗ ಮಲ ತೆಗೆದುಕೊಂಡು ಬಾ" ಅಂತ ಹೇಳಿ ಕಳುಹಿಸಿದ್ದರು. ಆ ಮರಾಠಿ ವಾರದ ಎಲ್ಲಾ ದಿನದ ಮಲವನ್ನು ಕಾದಿರಿಸಿ, ಒಂದು ದೊಡ್ಡ ಅಡಿಕೆ ಹಾಳೆಯಲ್ಲಿ ಚೆನ್ನಾಗಿ ಪ್ಯಾಕ್ ಮಾಡಿ ಡಾಕ್ಟರ್ ಹತ್ತಿರ ಬಂದ. ಕ್ಲಿನಿಕ್ ನಲ್ಲಿ ಬೇರೆಲ್ಲಾ ರೋಗಿಗಳು ಇದ್ದರು. ಇವನಿಗೆ ಡಾಕ್ಟರರಲ್ಲಿ ಹೇಳಲು ನಾಚಿಕೆ. ಪ್ಯಾಕೆಟನ್ನು ಹೊರಗೇ ಇಟ್ಟು, ಡಾಕ್ಟರ್ ಬಳಿ ಹೋಗಿ "ಡಾಕ್ಟ್ರೇ ಮೊನ್ನೆ ನೀವು ಏನೋ ತರುಕೆ ಹೇಳಿರಲ? ಅದ್ನ ತಂದವ್ನೆ" ಅಂದ. ಡಾಕ್ಟರ್ ರಿಗೆ ಮಲಪರೀಕ್ಷೆಗೆ ಹೇಳಿದ್ದು ನೆನಪು ಹೋಗಿತ್ತು. ಇವನು ಹೆಗ್ಲಿನೇ ತಂದಿರಬೇಕು ಎಂದೆಣಿಸಿ, "ಮೇಲೆ ಅಮ್ಮಾವ್ರು ಇದಾರೆ ತಗೊಂಡು ಹೋಗಿ ಕೊಡು" ಅಂದರು. ಇವ ನಾಚಿಕೆಯಿಂದ "ಇಲ್ಲಾ, ನೀವೆ ಇಟ್ಕಣಿ" ಅಂದ. ಅದಕ್ಕವರು "ಹೇ, ಹೋಗಾ ನಾನು ಕೊಟ್ಟು ಕಳಿಸಿದೆ ಅಂತ ಹೇಳು" ಅಂತ ಗದರಿದರು. ಮರಾಠಿ ಮಹಡಿ ಮೇಲೆ ಹೋಗಿ ಅಮ್ಮಾವ್ರ ಕರೆದು "ಇದ್ನ ಡಾಕ್ಟ್ರು ನಿಮ್ಮತ್ರ ಕೊಡಿ ಅಂದವ್ರೆ" ಅಂತ ಹೇಳಿ ಕೊಟ್ಟು ಬಂದ. ಡಾಕ್ಟ್ರ ಹೆಂಡತಿಗೂ ಇದೇನು ಹೊಸದಲ್ಲ, ಆಗಾಗ ಅವರಿವರು ಹೆಗ್ಲಿನ ತಂದು ಕೊಡುತ್ತಿದ್ದರು. ಇದು ಹಾಗೆ ಎಣಿಸಿ ಅಡುಗೆ ಮನೆಯ ಒಲೆಯ ಹತ್ತಿರ ಇಟ್ಟು ಬೇರೆ ಕೆಲಸದಲ್ಲಿ ತೊಡಗಿದರು. ಸ್ವಲ್ಪ ಹೊತ್ತಿನ ನಂತರ ಇದೇನೋ ವಾಸನೆ ಹೊಡೆಯುತ್ತಿದೆ ಎಂದು ತೆಗೆದು ನೋಡಿದರೆ...................................... :)
ನಂತರ ಆ ಡಾಕ್ಟರ್ ದಂಪತಿಗಳು ಹೆಗ್ಲಿ ತಿನ್ನುವುದು ಬಿಟ್ರು ಅನ್ನೋದು ಸುದ್ದಿ.

Wednesday, May 09, 2007

ಉತ್ಸವ - ಉಸ್ತವ

ಆಗಷ್ಟೇ ಹೈಸ್ಕೂಲಿನ ಓದು ಮುಗಿಸಿ ಭಟ್ಕಳದ ಸುಧೀಂದ್ರ ಕಾಲೇಜ್ ಸೇರಿದ್ದೆ. ಹೈಸ್ಕೂಲಿನ ಖಾಕಿ ಚಡ್ಡಿ ಬಿಳಿ ಅಂಗಿ ಸಮವಸ್ತ್ರದಿಂದ ಮುಕ್ತಿ ಹೊಂದಿ ಬಣ್ಣ ಬಣ್ಣದ ಪ್ಯಾಂಟು ಶರ್ಟ್ ಧರಿಸಲು ಶುರು ಮಾಡಿದ್ದೆ. ಮನೆಯಿಂದ ಕಾಲೇಜಿಗೆ 15 ನಿಮಿಷ ಬಸ್ಸಿನಲ್ಲಿ ಪ್ರಯಾಣ. ಆಗಲೇ ನಮ್ಮ ಊರಲ್ಲಿ ಒಂದೆರಡು ಹೆಣ್ಣು ಬಸ್ಸುಗಳಿದ್ದವು. ಆ ಬಸ್ಸಿನ ಮುಂದಿನ ಬಾಗಿಲಲ್ಲಿ ಜೋತಾಡಿಕೊಂಡು, ಹತ್ತಿ ಇಳಿಯುವವರಿಗೆ ಅನುವು ಮಾಡಿಕೊಟ್ಟು ಹೋಗುವುದರಲ್ಲೇ ಏನೋ ಖುಷಿ.



ನಾನು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ, ಕಾಲೇಜಿನ ಯಾವ ಪಾಠಗಳೂ ತಲೆಗೆ ಹತ್ತುತ್ತಿರಲಿಲ್ಲ, ಎಲ್ಲ ಕ್ಲಾಸಿನಲ್ಲಿ ಮೂಕನ ಹಾಗೆ ಕುಳಿತಿರುತ್ತಿದ್ದೆ. ನಮ್ಮ ಮ್ಯಾತ್ಸ್ ಲೆಕ್ಚರರ್ ಹನುಮೇಶ ವೈದ್ಯ ಅವರು ಆಗಾಗ ಹೇಳುತ್ತಿದ್ದ "Pardon" ಶಬ್ದದ ಉಚ್ಚಾರ ಮತ್ತು ಅರ್ಥ ತಿಳಿದುಕೊಳ್ಳಲು ತಿಂಗಳುಗಳೇ ಆಗಿದ್ದವು. ಈ ಪರಿಸ್ಥಿತಿಯಲ್ಲಿ ನನಗೆ ಮಾತಾಡಲು ಅವಕಾಶ ಇದ್ದ ಕ್ಲಾಸ್ ಅಂದರೆ ಕನ್ನಡ ಕ್ಲಾಸ್. ಆದರೆ ಆ ಕಾಲೇಜಿನವರಿಗೂ ಕನ್ನಡ ಅಂದ್ರೆ ಅಸಡ್ಡೆ ಇರಬೇಕು. ಯಾವುದೋ ಮೀಸಲಾತಿಯಿಂದ ಆಯ್ಕೆಯಾದ ಒಬ್ಬ ಮೇಡಮ್ ಅವರನ್ನು ನೇಮಿಸಿದ್ದರು. ಅವರ ಉಚ್ಚಾರವೇ ಸರಿಯಿರಲಿಲ್ಲ. ಒಂದೆರಡು ಕ್ಲಾಸ್ ಸುಮ್ಮನಿದ್ದೆ. ಒಂದು ದಿನ ಅವರು "ಉಸ್ತವ" ಎಂದು ಉಚ್ಚರಿಸಿದಾಗ, ಎದ್ದು ನಿಂತು "ಮೇಡಮ್ ಅದು ಉಸ್ತವ ಅಲ್ಲ, ಅದನ್ನು ಉತ್ಸವ ಎಂದು ಉಚ್ಚರಿಸಬೇಕು" ಎಂದು ಹೇಳಿದೆ. ಅವರು ಒಪ್ಪಲೇ ಇಲ್ಲ. ನಂತರ ನಾನೇ ಬೋರ್ಡ್ ಮೇಲೆ "ಉಸ್ತವ" ಎಂದು ಬರೆದು "ಇದನ್ನು ಹೇಗೆ ಉಚ್ಚರಿಸುತ್ತೀರಾ?" ಅಂತ ಕೇಳಿದೆ. "ಉಸ್ತವ" ಅಂದರು. "ಹಾಗಾದರೆ ಇವೆರಡಕ್ಕೆ ವ್ಯತ್ಯಾಸ ಇಲ್ಲವಾ?" ಅಂತ ಕೇಳಿದೆ. ಅದಕ್ಕವರು ಉದಾಹರಣೆ ಸಮೇತ ಉತ್ತರ ನೀಡಲು ಆರಂಭಿಸಿದರು, ಬೋರ್ಡ್ ಮೇಲೆ "to" ಮತ್ತು "two" ಎಂದು ಬರೆದು ನನಗೆ ಉಚ್ಚರಿಸಲು ಹೇಳಿದರು. ನನಗೆ ನಿಜಕ್ಕೂ ಶಾಕ್ ಹೊಡೆದ ಹಾಗೆ ಆಯ್ತು, ಏನು ಹೇಳಬೇಕೆಂದು ತಿಳಿಯದೆ, ನನ್ನ ಜಾಗದಲ್ಲಿ ಹೋಗಿ ಕುಳಿತೆ. ಅವರು ನನ್ನ ಕಡೆ ವಿಜಯದ ನಗೆ ಬೀರುತ್ತಾ, ಎಲ್ಲರಿಗೂ ವಿವರಿಸಿ ಹೇಳತೊಡಗಿದರು. "ಇಂಗ್ಲಿಷಲ್ಲಿ ಸ್ಪೆಲ್ಲಿಂಗ್ ಮತ್ತು ಉಚ್ಚಾರ ಹೇಗೆ ಬೇರೆ ಬೇರೆ ಇರುತ್ತದೋ, ಹಾಗೆ ಕನ್ನಡದಲ್ಲಿ ಈ ಶಬ್ದ ಕೂಡ ಅದೇ ರೀತಿ.................".

ನಂತರ ಪರೀಕ್ಷೆಯಲ್ಲಿ "ಉತ್ಸವ(ಉಸ್ತವ ಎಂದು ಓದಬೇಕು)" ಅಂತ ಬರೆದು ಪ್ರತಿಭಟಿಸಿದ್ದೆ. ಅದನ್ನು ಓದಿ ಆ ಮೇಡಮ್ ಸಿಟ್ಟುಗೊಂಡು, ಕಾರಣ ಹೇಳದೇ ನನ್ನನ್ನು ಒಂದು ವಾರ ಕ್ಲಾಸಿನಿಂದ ಹೊರಗೆ ಹಾಕಿದ್ದರು.