Thursday, July 29, 2010

ಟಾಯ್ಲಟ್ಟೋ? ರೆಸ್ಟ್ ರೂಮೋ?


ಇಂದಿನ "ನೂರೆಂಟು ಮಾತು" ಓದಿ, ನೆನಪಾಗಿದ್ದು ನನ್ನ ೨ ವರ್ಷದ ಹಿಂದಿನ ಒಂದು ಅನುಭವ.

ನನಗೂ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಮೊದಲು ಟಾಯ್ಲಟ್ಟಿಗೆ ರೆಸ್ಟ್ ರೂಂ ಅನ್ನುತ್ತಾರೆ ಎಂಬ ಕಲ್ಪನೆ ಇರಲಿಲ್ಲ. ಮೊದಲು ಆಶ್ಚರ್ಯವೆನಿಸಿ ನಂತರ ರೂಢಿ ಆಗಿತ್ತು.

ಒಮ್ಮೆ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ಸೆಕ್ಯುರಿಟಿಯನ್ನು ರೆಸ್ಟ್ ರೂಮ್ ಎಲ್ಲಿದೆ ಅಂದೆ. ಅವನು ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡತೊಡಗಿದ. ನಂತರ ನೆನಪಾಗಿ ಟಾಯ್ಲೆಟ್ ಎಲ್ಲಿದೆ ಅಂದೆ. ಅವನಿಗೆ ನಗು ತಡೆದುಕೊಳ್ಳಲಾಗದೆ, "ಏನ್ರೀ, ಟಾಯ್ಲೆಟ್ ಗೆ ರೆಸ್ಟ್ ರೂಮ್ ಅಂತೀರಲ್ರೀ, ಅಲ್ಲೇನ್ರಿ ನೀವು ರೆಸ್ಟ್ ಮಾಡೋದು ಅಂದ". ನನಗೆ ನಾಚಿಕೆಯಾಗಿ "ಸರ್, ಎಲ್ಲಿದೆ ತೋರಿಸಿ" ಎಂದು ವಿನಯವಾಗಿ ಕೇಳಿದೆ. ಅವನು ಟಾಯ್ಲಟ್ ತೋರಿಸಿ, ಅಲ್ಲಿದ್ದ ಎಲ್ಲವರಿಗೂ ವಿಷಯ ಹೇಳಿ ನಗಲಾರಂಭಿಸಿದ. ನನಗೆ ಇನ್ನೂ ನಾಚಿಕೆಯಾಗಿ ಬೇಗ ನನ್ನ ಕಾರ್ಯ ಮುಗಿಸಿ ಹೊರಗೆ ಬಂದರೆ, ಅವನು ಜೋರಾಗಿ "ಇವ್ರೇ ನೋಡ್ರಿ, ರೆಸ್ಟ್ ರೂಮ್ ಕೇಳಿದವರು" ಅಂತ ಎಲ್ಲರಿಗೂ ನನ್ನ ತೋರಿಸಲಾರಂಭಿಸಿದ. ಎಲ್ಲರೂ ನನ್ನ ನೋಡಿ ಮುಸಿಮುಸಿ ನಗಲಾರಂಬಿಸಿದರು. ನನಗೆ ಅವಮಾನ ತಾಳಲಾಗದೇ ಅಲ್ಲಿಂದ ಜಾಗ ಖಾಲಿ ಮಾಡಿದೆ.

ನಮಗೆಷ್ಟು ಲೋಕ ಜ್ಞಾನವಿದ್ದರೂ, ವ್ಯವಹಾರ ಜ್ಞಾನವಿಲ್ಲದಿದ್ದರೆ ವ್ಯರ್ಥ.