Monday, April 09, 2007

ನಮ್ಮೂರ ಕೆರೆ ಬತ್ತುತ್ತಿದೆ......

ದಿನಗಳೆದಂತೆ ನಮ್ಮೂರ ಕೆರೆ ಬತ್ತುತಿದೆ,
ಅದ ನೋಡಿ ಎನ್ನ ಕಣ್ಣಾವಲಿಗಳು ತುಂಬುತಿದೆ

ಕೆರೆಗೆ ಬಂದು ಸೇರುತಿದ್ದ ತೊರೆಯು,
ಕೆರೆಯ ಸ್ನೇಹ ತೊರೆದಿದಂತಿದೆ

ತೂಗಿ ನಗುವ ಬೀರುತಿದ್ದ ತಾವರೆಯು
ತನ್ನ ತವರ ಮರೆತಿದಂತಿದೆ.

ಊರ ದಾಹವ ತೀರುತಿದ್ದ ಕೆರೆಯು
ತನ್ನ ದಾಹವಿಂಗಿಸಲು ಆಗಸವ ನೋಡುವಂತಿದೆ.

ತುಂಬಿ ಹರಿಯುತ್ತಿದ್ದ ನೀರು ತಳದ ಕೆಸರಾಗಿದೆ,
ಆ ನೇಸರನ ಉರಿ ತಾಪವ ತಾಳಲಾಗದೆ

ತೊರೆಗೆ ಏಳುತ್ತಿದ್ದ ಬಿಳಿಯ ನೊರೆಯಿಲ್ಲ,
ತಟದಲ್ಲಿ ನೆರೆಯುತ್ತಿದ್ದ ಬೆಳ್ಳಕ್ಕಿಯ ಬಳಗವಿಲ್ಲ

ಅಲ್ಲೀಗ ನೀರಿನ ಚಿಕ್ಕ ಸುಳಿಯಿಲ್ಲ,
ಆಡುತ್ತಿದ್ದ ಚಿಕ್ಕ ಮಕ್ಕಳ ಸುಳಿವಿಲ್ಲ

ತಂಪು ಗಾಳಿಗೆ ಏಳುತಿದ್ದ ತೆರೆಯಿಲ್ಲ,
ಕೆರೆಯ ಈ ಸ್ಥಿತಿ ಮನುಕುಲಕೆ ತರವಲ್ಲ

ಸುಮ್ಮನೆ ಕುಳಿತಿರುವೆಯಾ ಇದ ನೋಡಿ?
ಏಳಲಿ ನಿನ್ನಲಿ ಪರಿಸರ ಜಾಗೃತಿಯ ಕಿಡಿ
ನೀನಲ್ಲವೇ, ಈ ಕೆರೆಯ ನೀರನು ಕುಡಿದು ಬೆಳೆದ ನಮ್ಮೂರ ಕರುಳ ಕುಡಿ?

ಸೇದಿದ ಮೊದಲ ಬೀಡಿ.

ಯಾವುದಾದರೂ ವಿಷಯ ಅಥವಾ ವಸ್ತುವಿನಲ್ಲಿ ನನಗೆ ಆಸಕ್ತಿ ಉಂಟಾದರೆ ಅದನ್ನ ಪೂರ್ತಿ ತಿಳಿದು ಕೊಳ್ಳುವರೆಗೆ ನನ್ನಲ್ಲಿ ಏನೋ ಚಡಪಡಿಕೆ. ನಾನು ಎರಡನೇ ಕ್ಲಾಸಿನಲ್ಲಿರುವಾಗ ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದು ಎರಡಾಣೆಯ ಬೀಡಿ. ಇದಕ್ಕೆ ನಮ್ಮೂರಿನ ಭುಜಂಗ ಮಾಸ್ತರರು ಬೀಡಿ ಎಳೆಯುತ್ತಿದ್ದ ಶೈಲಿಯೇ ಕಾರಣವಾಗಿರಬೇಕು. ನನಗೆ ಬೀಡಿಯ ಬಗ್ಗೆ ಜ್ಞಾನ ಎಷ್ಟಿತ್ತೆಂದರೆ ಬೀಡಿ ಸೇದುವಾಗ ಉಸಿರನ್ನು ಒಳಗೆ ಎಳೆಯಬೇಕೋ ಅಥವಾ ಹೊರಗೆ ಬಿಡಬೇಕೋ ಅಂತ ಕೂಡ ತಿಳಿದಿರಲಿಲ್ಲ. ಹಾಗಂತ ಅದರ ಬಗ್ಗೆ ತಿಳಿದುಕೊಳ್ಳದೇ ಪ್ರಯೋಗ ಮಾಡುವ ಧೈರ್ಯವೂ ಇರಲಿಲ್ಲ.

ಒಮ್ಮೆ ನಮ್ಮ ಮನೆಯ ಯಾವುದೋ ಸಮಾರಂಭಕ್ಕೆ ಬಂದಿದ್ದ ಭುಜಂಗ ಮಾಸ್ತರರು, ಊಟದ ನಂತರ ಬವಂತಿಯ ಜಗುಲಿ ಮೇಲಿನ ತಳಿಯ ಬಾಗಿಲಿಗೆ ಒರಗಿ ಕುಳಿತು ಬೀಡಿ ಹಚ್ಚಿದರು. ಸಣಕಲು ದೇಹ ವಯಸ್ಸು ಸುಮಾರು 60 ಇರಬೇಕು. ಮನಸ್ಸು ಮಾತ್ರ ಮಗುವಿನಂತದ್ದು, ಕೀರು ದನಿ, ಒಬ್ಬರಿಗೂ ಗಟ್ಟಿ ಮತಾಡಿ ಗೊತ್ತಿಲ್ಲ. ಅವರು ಮಾಸ್ತರರಾಗಿ ನಿವೃತ್ತಿಯಾಗುವವರೆಗೂ ಒಬ್ಬೇ ಒಬ್ಬ ಶಿಷ್ಯನಿಗೂ ಹೊಡೆದಿರಲಿಲ್ಲವಂತೆ. ಅವರು ಹಾಗೆ ಒಂದೊಂದು ದಮ್ಮು ಎಳೆದು ಬಿಡುತ್ತಿದ್ದ ಹೊಗೆ ತಳಿಯ ಕಂಬಗಳನ್ನು ಬಳಸಿ ಹೊರನಡೆಯುತ್ತಿತ್ತು. ಹಾಗೆ ಒಂದು ನಿಮಿಷ ಮುಂಡಗಿ ಕಂಬಕ್ಕೆ ಒರಗಿ ನೋಡುತ್ತಾ ಇದ್ದೆ. ಒಮ್ಮೆ ಗಟ್ಟಿ ಮನಸ್ಸು ಮಾಡಿ ಅವರ ಹತ್ತಿರ ಹೋಗಿ "ಬೀಡಿ ಎಳೆಯುವಾಗ ಉಸಿರನ್ನು ಒಳಗೆ ಎಳೆಯಬೇಕೋ ಹೊರಗೆ ಬಿಡಬೇಕೋ" ಅಂತ ಕೇಳಿಯೇ ಬಿಟ್ಟೆ. ಪಾಪದ ಮಾಸ್ತರರಾದ್ದರಿಂದ ನಂಗೆ ಒಂದು ಮಾತನ್ನೂ ಬೈಯ್ಯದೇ ಪ್ರಾತ್ಯಕ್ಷಿಕೆ ಸಮೇತ ಬೀಡಿ ಸೇದುವ ವಿಧಾನ ವಿವರಿಸಿದರು. ಆದರೇ ನನಗೆ ಅದನ್ನು ಪ್ರಯೋಗ ಮಾಡದ ಹೊರತು ಸಮಾಧಾನ ಇರಲಿಲ್ಲ.

ಅಂಗಳ ಹೆಬ್ಬಾಗಿಲು ದಾಟಿ ನಮ್ಮ ಮನೆ ಹೊಕ್ಕಿದೊಡನೆ ಸಿಗುವುದೇ ಆಯತಾಕಾರದ ದೊಡ್ಡ ಬವಂತಿ. ಅದರ ಮೂರು ಪಾರ್ಶ್ವದಲ್ಲಿ ಒಂದಡಿ ಎತ್ತರದ ಜಗುಲಿ. ಜಗುಲಿಗೆ ಬಳಸಿದಂತೆ ಬೃಹದಾಕಾರದ ಎಂಟು ಮುಂಡಗಿ ಕಂಬಗಳು. ಮಧ್ಯದಲ್ಲಿ ಪ್ರಧಾನ ಬಾಗಿಲು. ಪ್ರಧಾನ ಬಾಗಿಲ ಮೇಲೆ ಒಂದೆರಡು ದೇವರ ಫೋಟೊ. ಬಲಗಡೆ ಅಜ್ಜಯ್ಯನ ಹಳೆಯ ಎರಡು ಆರಾಮ ಕುರ್ಚಿಗಳು ಮತ್ತು ಹೊಸದಾಗಿ ಮಾಡಿಸಿದ ಒಂದು ಸ್ಟೂಲು.

ಮಧ್ಯಾಹ್ನದಿಂದ ಒಂದು ಬೀಡಿ ನನ್ನ ಚಡ್ಡಿ ಕಿಸೆಯಲ್ಲೇ ಇತ್ತು, ಆಗಾಗ ಅದನ್ನ ಮುಟ್ಟಿ ನೋಡಿಕೊಳ್ತಾ ಸರಿಯಾದ ಸಮಯಕ್ಕಾಗಿ ಕಾಯ್ತಾ ಇದ್ದೆ . ಸಂಜೆ ಆಗುವಷ್ಟರಲ್ಲಿ ಬಂದ ನೆಂಟರೆಲ್ಲಾ ಜಾಗ ಖಾಲಿ ಮಾಡಿದ್ದರು. ಆಗಿನ್ನೂ ನಮ್ಮ ಮನೆಗೆ ಕರೆಂಟು ಬಂದಿರಲಿಲ್ಲ. ಬವಂತಿಯ ಮಧ್ಯದಲ್ಲಿ ನೇತುಹಾಕಿದ್ದ ಲಾಟೀನಿನ ಮಬ್ಬು ಬೆಳಕು, ಬವಂತಿಯನ್ನು ಅಸ್ಪಷ್ಟವಾಗಿ ತೋರಿಸುತ್ತಿತ್ತು. ಮನೆಯವರೆಲ್ಲಾ ಒಳಗೆ ಹಿತ್ತಲಕಡೆಯಲ್ಲಿ ಇದ್ದರು. ಬವಂತಿ ನಿರ್ಜನವಾಗಿತ್ತು. ನಾನು ಎರಡು ಆರಾಮ ಕುರ್ಚಿಗಳ ನಡುವೆ ಜಾಗ ಮಾಡಿಕೊಂಡು ಚಡ್ಡಿಯಲ್ಲಿದ್ದ ಬೀಡಿ ತೆಗೆದು ಹೊತ್ತಿಸಿದೆ, ಭುಜಂಗ ಮಾಸ್ತರರ ನೆನೆಯುತ್ತಾ ಒಂದು ದಮ್ಮು ಎಳೆಯುವಷ್ಟರಲ್ಲಿ ಪ್ರಧಾನ ಬಾಗಿಲಿಂದ ಯಶೋದತ್ತೆ ಹೊರಗೆ ಬಂದಳು. ಆ ಮಬ್ಬು ಬೆಳಕಿನಲ್ಲಿ ಬೀಡಿಯ ಬೆಂಕಿ ಸ್ಪಷ್ಟವಾಗಿ ಕಾಣುತ್ತಿತ್ತು. "ಯಾರದು?" ಎಂದಳು. ನಾನು ಬೀಡಿಯನ್ನು ನೆಲಕ್ಕೆ ಎಸೆದೆ. ಹತ್ತಿರ ಬಂದು "ಗುರು ಬೀಡಿ ಸೇದುತ್ತಾ ಇದ್ಯಾ?" ಅಂತ ಕೇಳಿದಳು. ನಾನು ಉತ್ತರಿಸಬೇಕಾದ ಅಗತ್ಯ ಇರಲಿಲ್ಲ. ನಾನು ಬೀಡಿಗೆ ಬೆಂಕಿ ಹಚ್ಚಿದ್ದು, ಮನೆಮಂದಿಗೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿ ನಂತರ ಅದೇ ಮಾಮೂಲು ನುಕ್ಕಿ ಬಡ್ರು, ಪರಂಗಿಮಣೆ. ಇದು ಬೀಡಿಗಿಂತ ಏನೂ ವಿಶೇಷ ಅಲ್ಲ ಬಿಡಿ.

Friday, April 06, 2007

ನಾನೊಂದು ನಾನ್ ತಿಂದೆ.

ನಿನ್ನೆ ಬಸವನಗುಡಿಯ ಕಾಮತ್ ಬ್ಯೂಗಲ್ ರಾಕ್ ನಲ್ಲಿ ನಮ್ಮ ಬಾಸ್ ಅವರ ಬರ್ತಡೆ ಪಾರ್ಟಿ ಇತ್ತು. ನಾನು, ಕಾಶಿ, ಜೆಸಿ, ಜ್ಯೋತಿ, ಪದಿ, ಆದು, ಜಗ್ಗಣ್ಣ ಹೀಗೆ ಸುಮಾರು ಹತ್ತು ಜನ ಸೇರಿದ್ದೆವು. ಫಸ್ಟ್ ಫ್ಲೋರಿನ ಒಂದು ರೌಂಡ್ ಟೇಬಲ್ಲಿನಲ್ಲಿ ಕುಳಿತು ಸುತ್ತಲೂ ಸೇರಿದ್ದ ಬಿ.ಎಂ.ಎಸ್. ಕಾಲೇಜಿನ ಹಕ್ಕಿಗಳ ಸೌಂದರ್ಯ ವಿಮರ್ಶೆ ಮಾಡುತ್ತಾ ಕುಳಿತಿದ್ದೆವು.

ಸಪ್ಲೈಯರ್ ಬಂದು "ಏನು ಬೇಕು ಸರ್?" ಅಂದ. "ಏನಿದೆ?" ಅಂತ ಕೇಳಿದ್ದಕ್ಕೆ "ನಾನ್ ಇದೆ" ಅಂದ. ಪಕ್ಕದಲ್ಲಿದ್ದ ಜಗ್ಗಣ್ಣ "ನನಗೊಂದು ನಾನ್" ಅಂದ. ನನಗೆ ಅವರಿಬ್ಬರ ಸಂಭಾಷಣೆ ಅರ್ಥ ಆಗಲಿಲ್ಲ. ಸ್ವಲ್ಪ ಸಮಯದ ನಂತರ ತಿಳಿಯಿತು ಅದೊಂದು ರೊಟ್ಟಿ ತರಹದ ತಿಂಡಿ ಎಂದು. ದರ್ಶಿನಿ, ಸಾಗರಗಳಲ್ಲಿ ಇಡ್ಲಿ ಸಾಂಬಾರ್ ತಿನ್ನುವವನಿಗೆ ಇದೆಲ್ಲಿಂದ ಗೊತ್ತಿರಬೇಕು?

ಅದಕ್ಕೆ ಆ ಹೆಸರು ಇಟ್ಟ ಪುಣ್ಯಾತ್ಮನ ವಿಚಾರ ಏನಿತ್ತೋ ಏನೋ? "ನಾನು" ಎನ್ನುವುದು ಅಹಂಕಾರದ ಪ್ರತೀಕ, ಅದನ್ನ ತಿಂದು ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದೆಂದೋ ಅಥವಾ ತಿಂದು ಹೆಚ್ಚುಮಾಡಿಕೊಳ್ಳುವುದೆಂದೋ? ತಿಳಿದವರು ಹೇಳಿದರೆ ಒಳಿತು.

ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಹೋದಾಗ ಅಮ್ಮ "ಊಟ ಆಯಿತಾ ಮಗಾ?" ಅಂತ ಕೇಳಿದಳು. "ಊಟ ಮಾಡಿಲ್ಲೆ, ನಾನೊಂದು ನಾನು ತಿಂದೆ" ಅಂದೆ. ಅಮ್ಮನಿಗೆ ಅರ್ಥವಾಗದೆ "ಏನಾದರೂ ತಿನ್ನು ಈಗ ನನ್ನ ತಲೆ ತಿನ್ನಬೇಡ ಬಿದ್ಕ ಸುಮ್ನೆ" ಅಂದಳು.

Wednesday, April 04, 2007

ಕಾಪಿ ತರಿಸುತ್ತಿದ್ದ ಕೋಪ

ಶಾಲೆಗೆ ಹೋದವರು ಯಾರೂ ಕಾಪಿ ಬರೆಯುವ ಕೆಲಸದಿಂದ ತಪ್ಪಿಸಿಕೊಂಡವರು ಇರಲಿಕ್ಕಿಲ್ಲ. ನಾನು ನನ್ನ ಮನಸಾರೆ ಅದನ್ನ ದ್ವೇಷಿಸುತ್ತಿದ್ದೆ. ಅದರ ಪರಿಣಾಮವೇ ನನ್ನ ಕೋಳಿ ಕಾಲು ಗುಬ್ಬಿ ಕಾಲಿನಂತಹ ಅಕ್ಷರಗಳು. ನಮಗೆ ಎರಡು ಗೆರೆ ಪಟ್ಟಿಯಲ್ಲಿ ದಿನಕ್ಕೊಂದು ಪುಟ ಕನ್ನಡ ಕಾಪಿ ಬರೆಯಬೇಕಿತ್ತು. 12 ಸಾಲುಗಳಿರುವ ಸುಲೇಖ, ಲೇಖಕ್ ಪಟ್ಟಿಗಳನ್ನು ಬಿಟ್ಟು ಬರೀ 10 ಸಾಲು ಇರುವ ಬೇರೆ ಪಟ್ಟಿಯನ್ನೇ ಕೊಂಡು ತಂದು ಬರೆಯುತ್ತಿದ್ದೆ. ಒಂದೊಂದು ಸಾಲಿನಲ್ಲೂ ಕೇವಲ ಮೂರೇ ಮೂರು ಶಬ್ದ ಬರೆದು, ಕೊನೆಯ ಎರಡು ಸಾಲುಗಳನ್ನ ಸುಮ್ಮನೆ ಕಾಟು ಹೊಡೆದು ನನ್ನ ಕೋಪ ತೀರಿಸಿಕೊಳ್ಳುತ್ತಿದ್ದೆ.

ನಾನು ಅಜ್ಜಿಮನೆಯಲ್ಲಿ ಇದ್ದು ಶಾಲೆಗೆ ಹೋಗುತ್ತಿದ್ದೆ. ನನ್ನ ಚಿಕ್ಕಮ್ಮನೇ ನಂಗೆ ಟೀಚರ್. ಅದು ಏಕೋಪಾಧ್ಯಾಯ ಶಾಲೆ. ಒಂದೇ ಕೋಣೆ ನಾಲ್ಕು ಕ್ಲಾಸು. ಅವಳಿಗೆ ಎಲ್ಲರೂ ಬರೆದ ಕಾಪಿಯನ್ನು ನೋಡುವುದು ಕಷ್ಟವಾದ್ದರಿಂದ ನಮ್ಮ ಕ್ಲಾಸಿನ ಕಾಪಿ ಚೆಕ್ ಮಾಡುವ ಕೆಲಸ ನಂಗೆ ಕೊಟ್ಟಿದ್ದಳು. "ಕಳ್ಳನ ಕೈಯಲ್ಲಿ ಬೀಗ". ನಮ್ಮ ಕ್ಲಾಸಿನ ಎಲ್ಲರ ಕಾಪಿಯನ್ನು ಸ್ಟ್ರಿಕ್ಟ್ ಆಗಿ ಚೆಕ್ ಮಾಡ್ತಿದ್ದೆ ಆದರೆ ನಾನು ಮಾತ್ರ ಪ್ರಾಮಾಣಿಕವಾಗಿ ಕಾಪಿ ಬರೆಯುವುದನ್ನೇ ನಿಲ್ಲಿಸಿದೆ. ಸುಮಾರು ನಾಲ್ಕು ತಿಂಗಳು ಆರಾಮ ಆಗಿ ಕಾಪಿ ಬರೆಯದೆ ಕಳೆದೆ. ಒಂದು ದಿನ ಎಡ ಮಗ್ಗುಲಲ್ಲಿ ಎದ್ದಿದ್ದನೋ ಏನೋ? ಸಿಕ್ಕಿಬಿದ್ದೆ. ಮೊದಲನೆಯದಾಗಿ ದಾಸವಾಳ ಬಡ್ರು(ಕೋಲು) ಹುಡಿ ಆಯ್ತು, ಸಿದ್ದನ ಮನೆ ಕೃಷ್ಣನಿಂದ ನುಕ್ಕಿ ಬಡ್ರು ತರಿಸಿ ಅದರಿಂದ ಸೇವೆ ಆಯ್ತು, ಎಲ್ಲಾ ತರಹದ ಪೂಜೆ ಆದಮೇಲೆ ಅನುಭವಿಸಿದ್ದೇ ಪರಂಗಿಮಣೆ. ಪರಂಗಿಮಣೆ ಅಂದ್ರೆ ಒಂದು ತರಹದ ಶಿಕ್ಷೆ. ನಿಲ್ಲುವ ಮತ್ತು ಕುಳಿತುಕೊಳ್ಳುವುದರ ನಡುವಿನ ತ್ರಿಶಂಕು ಸ್ಥಿತಿ. ಯೋಗಾಸನದ ಭಾಷೆಯಲ್ಲಿ ಹೇಳುವುದಾದರೆ "ಪಾದದಿಂದ ಮೊಣಕಾಲು ಗಂಟಿನವರೆಗಿನ ಭಾಗ ಭೂಮಿಗೆ ಲಂಬವಾಗಿದ್ದು, ಮೊಣಕಾಲು ಗಂಟಿನಿಂದ ಸೊಂಟದವರೆಗಿನ ಭಾಗ ಭೂಮಿಗೆ ಸಮಾನಾಂತರವಾಗಿರಬೇಕು ಮತ್ತು ಸೊಂಟದಿಂದ ಮೇಲಿನ ಭಾಗ ಭೂಮಿಗೆ ಲಂಬವಾಗಿರಬೇಕು. " ಈ ಸ್ಥಿತಿಯಲ್ಲಿ ನಿಲ್ಲಿಸಿ ತೊಡೆಯ ಮೇಲೆ ಒಂದು ಪುಸ್ತಕ ಇಟ್ಟು, ಅದು ನೆಲಕ್ಕೆ ಬಿದ್ದರೆ ಮತ್ತೆ ಪೆಟ್ಟು. ಈ ಪರಂಗಿಮಣೆ ಶಿಕ್ಷೆಯನ್ನು ಎರಡು ತಾಸು ಅನುಭವಿಸಿ ಮನೆಗೆ ಹೋದರೆ ಅಲ್ಲಿ ಮತ್ತೆ ಅದೇ ಚಿಕ್ಕಮ್ಮ. ಬೆಳಿಗ್ಗೆ ಒಳಗೆ ನಾನು ಬಾಕಿ ಉಳಿಸಿದ ಸುಮಾರು 120 ಪುಟಗಳನ್ನು ಬರೆದು ಮುಗಿಸಬೇಕೆಂಬ ಆಜ್ಞೆ ಬೇರೆ. ಆಗ ನನ್ನ ಸಹಾಯಕ್ಕೆ ಬಂದಿದ್ದು ಅಜ್ಜಯ್ಯ. ಅಜ್ಜಯ್ಯನಿಗೆ ನನ್ನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ, ನಾನೇ ಅವನಿಗೆ ಮೊದಲ ಮೊಮ್ಮಗ. ಎಲ್ಲೋ ಹೊರಗೆ ಹೋಗಿದ್ದ ಅಜ್ಜಯ್ಯ ಬಂದ. ನನ್ನ ಅಳು ಸ್ವಲ್ಪ ಜಾಸ್ತಿ ಮಾಡಿದೆ. ಏನು ಎತ್ತ ಅಂತ ಎಲ್ಲಾ ವಿಚಾರಿಸಿ, ಚಿಕ್ಕಮ್ಮನ ತರಾಟೆ ತಗೊಂಡ ನಂಗೆ ಒಳಗೊಳಗೆ ಖುಷಿ. ಅವನದ್ದು ಒಂದೇ ಪ್ರಶ್ನೆ ಪುಸ್ತಕದಲ್ಲಿದ್ದುದನ್ನ ನಾನು ಯಾಕೆ ಮತ್ತೆ ಬರೀಬೇಕು ಅಂತ. ಹಾಗೂ ಹೀಗೂ ಸಂಧಾನ ಮಾಡಿ ಬಾಕಿಯನ್ನು ಒಂದು ವಾರದ ಒಳಗೆ ಬರೆಯಬೇಕೆಂದು ನಿರ್ಧಾರ ಆಯ್ತು.

ನಾಲ್ಕನೇ ಕ್ಲಾಸ್ ಮುಗಿಸಿ ಐದನೇ ಕ್ಲಾಸಿಗೆ ಬಂದರೆ ಇನ್ನು ಎರಡು ಕಾಪಿ(ಇಂಗ್ಲಿಷ್, ಹಿಂದಿ) ಹೆಚ್ಚು ಆಗಿತ್ತು. ಬೇಸಿಗೆ ಮತ್ತು ದಸರಾ ರಜೆಯಲ್ಲೂ ಕಾಪಿ ಬರೆಯಲು ಹೇಳುತ್ತಿದ್ದರು. ರಜೆಯ ಮೊದಲ ಎರಡು ದಿನ ಕುಳಿತು ಎಲ್ಲ ದಿನದ ಕಾಪಿ ಬರೆದು ಮುಗಿಸುತ್ತಿದ್ದೆ, ಇಲ್ಲಾ ಯಾರಿಗಾದರೂ outsource ಮಾಡುತ್ತಿದ್ದೆ. ಇದರ ಜೊತೆ ಮೊದಲಿನಿಂದ ಬರೆಯುತ್ತಿದ್ದ ಒಳ್ಳೆಯ ಕೆಲಸ. ದಿನಾಲು ಒಂದೊಂದು ಒಳ್ಳೆಯ ಕೆಲಸ ಬರೆಯಬೇಕಿತ್ತು. ನಾನು ಒಳ್ಳೆಯ ಕೆಲಸವನ್ನು ಹುಡುಕಿ ಬರೆಯುತ್ತಿದ್ದನೇ ಹೊರತು ಒಳ್ಳೆಯ ಕೆಲಸ ಮಾಡಿ ಬರೆಯುತ್ತಿದ್ದುದು ಕಡಿಮೆ. ಒಂದು ದಿನ "ಇಂದು ನಾನು ಯವುದೇ ಒಳ್ಳೆಯ ಕೆಲಸ ಮಾಡಲಿಲ್ಲ" ಎಂದು ಬರೆದುಕೊಂಡು ಹೋಗಿ ಬೈಸಿಕೊಂಡಮೇಲೆ ಇದರ ಒಳಗುಟ್ಟು ತಿಳಿದುಹೋಯ್ತು. ದಿನಾಲು ಹೊಸ ಹೊಸ ಒಳ್ಳೆಯ ಕೆಲಸ ಹುಡುಕಿ ಬರೆದುಕೊಂಡು ಹೋಗುವುದೇ ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಯಾವುದು ಸಿಗದಿದ್ದರೆ ಹಿಂದಿನ ಪುಟಗಳನ್ನು ತಿರುವಿ, ಅದರಲ್ಲೇ ಒಂದನ್ನು ಆರಿಸಿ ಬರೆಯುತ್ತಿದ್ದೆ. ನನ್ನ ತಂಗಿಯಂತೂ ಯಾವಗಲೋ ಒಮ್ಮೆ ನಮ್ಮ ಅಜ್ಜಿಗೆ ಮರಿಗೆಯಿಂದ ಉಪ್ಪು ತಂದು ಕೊಟ್ಟಿದ್ದನ್ನು "ನಾನು ಇಂದು ಅಜ್ಜಿಗೆ ಉಪ್ಪು ತಂದು ಕೊಟ್ಟೆನು" ಎಂದು ಆಗಾಗ ಬರೆಯುತ್ತಿದ್ದಳು. ಒಂದು ದಿನ ಸುಬ್ಬಕ್ಕೋರು ನಿಮ್ಮ ಅಜ್ಜಿ ಇಷ್ಟೊಂದು ಉಪ್ಪನ್ನು ಏನು ಮಾಡ್ತಾರೆ ಅಂತ ಕೇಳಿದ್ದರು. ಅದಕ್ಕೆ ತಂಗಿ ನಾವು ದಿನಾಲು ಶಾಲೆಯಿಂದ ಮನೆಗೆ ಹೋದ ಮೇಲೆ ದೃಷ್ಟಿ ತೆಗಿತಾರೆ ಅಂತ ತಿರುಗಿ ಹೇಳಿದಾಗ ಸುಬ್ಬಕ್ಕೋರಿಗೆ ಏನು ಹೇಳಬೇಕೆಂದು ತಿಳಿದೇ ಸುಮ್ಮನಾಗಿದ್ದರು.

ಹೈಸ್ಕೂಲಿಗೆ ಹೋದಮೇಲೆ ತಿಗಡಿ ಮಾಸ್ತರರ ಹಿಂದಿ ಕಾಪಿ ಬರೆಯುವುದೇ ದೊಡ್ದ ತಲೆನೋವು ಆಗಿ ಹೋಗಿತ್ತು. ಮೊದಲೇ ಕಾಪಿ ಬರೆಯುವುದೆಂದರೆ ನಾನು ಹಿಂದೆ. ಆದರಲ್ಲೂ ಅದು ಹಿಂದಿ ಅಕ್ಷರ ಎಲ್ಲೆಲ್ಲೋ ಸುತ್ತಿ ಬಳಸಿ, ಮೇಲೆ ಒಂದು ಅಡ್ದ ಗೆರೆ ಹಾಕುವಷ್ಟರಲ್ಲಿ ಕೈಬೆರಳುಗಳ ಮೂಳೆಯೆಲ್ಲಾ ಮುರಿದ ಅನುಭವ. ಅದು ಒಂದು ಗೆರೆ ಪಟ್ಟಿಯಲ್ಲಿ ಬರೀಬೇಕು. 18 ರಿಂದ 20 ಸಾಲುಗಳು. ಇವರು ಸಹ ಪ್ರತಿದಿನ ನೋಡುತ್ತಿರಲಿಲ್ಲ, ನೋಡಿದ ದಿನ ಮಾತ್ರ ಆವತ್ತಿನ ದಿನಾಂಕ ಹಾಕಿ ತೋರಿಸುತ್ತಿದ್ದೆ. ಕಾಲೇಜಿಗೆ ಹೋದ ನಂತರ ನೋಟ್ಸ್ ಬರೆಯಲು ಉದಾಸೀನವಾಗಿ ಪಕ್ಕದವ ನೋಟ್ಸ್ ಬರೆಯುವಾಗ ಕಾರ್ಬನ್ ಇಟ್ಟು ಅಡಿಯಲ್ಲಿ ನನ್ನ ಪೇಪರ್ ಇಡುತ್ತಿದ್ದೆ.

ಕಾಪಿ ಬರೆಸುವ ಉದ್ದೇಶ ಸುಂದರವಾಗಿ ಬರೆಯಲು ಕಲಿಸುವುದು ಮಾತ್ರ ಆಗಿದ್ದರೆ ಈಗಂತೂ ಕಂಪ್ಯೂಟರ್ ಇರುವುದರಿಂದ ಅದರ ಅಗತ್ಯ ಇರಲಿಲ್ಲ. ಇದು ನಮ್ಮ ಭಾಷಾ ಜ್ಞಾನವನ್ನೂ ಹೆಚ್ಚಿಸುತ್ತದೆ. ಏನು ಮಾಡುವುದು ಕೆಟ್ಟ ಮೇಲೆ ........ ..........