Monday, April 09, 2007

ಸೇದಿದ ಮೊದಲ ಬೀಡಿ.

ಯಾವುದಾದರೂ ವಿಷಯ ಅಥವಾ ವಸ್ತುವಿನಲ್ಲಿ ನನಗೆ ಆಸಕ್ತಿ ಉಂಟಾದರೆ ಅದನ್ನ ಪೂರ್ತಿ ತಿಳಿದು ಕೊಳ್ಳುವರೆಗೆ ನನ್ನಲ್ಲಿ ಏನೋ ಚಡಪಡಿಕೆ. ನಾನು ಎರಡನೇ ಕ್ಲಾಸಿನಲ್ಲಿರುವಾಗ ನನ್ನಲ್ಲಿ ಆಸಕ್ತಿ ಹುಟ್ಟಿಸಿದ್ದು ಎರಡಾಣೆಯ ಬೀಡಿ. ಇದಕ್ಕೆ ನಮ್ಮೂರಿನ ಭುಜಂಗ ಮಾಸ್ತರರು ಬೀಡಿ ಎಳೆಯುತ್ತಿದ್ದ ಶೈಲಿಯೇ ಕಾರಣವಾಗಿರಬೇಕು. ನನಗೆ ಬೀಡಿಯ ಬಗ್ಗೆ ಜ್ಞಾನ ಎಷ್ಟಿತ್ತೆಂದರೆ ಬೀಡಿ ಸೇದುವಾಗ ಉಸಿರನ್ನು ಒಳಗೆ ಎಳೆಯಬೇಕೋ ಅಥವಾ ಹೊರಗೆ ಬಿಡಬೇಕೋ ಅಂತ ಕೂಡ ತಿಳಿದಿರಲಿಲ್ಲ. ಹಾಗಂತ ಅದರ ಬಗ್ಗೆ ತಿಳಿದುಕೊಳ್ಳದೇ ಪ್ರಯೋಗ ಮಾಡುವ ಧೈರ್ಯವೂ ಇರಲಿಲ್ಲ.

ಒಮ್ಮೆ ನಮ್ಮ ಮನೆಯ ಯಾವುದೋ ಸಮಾರಂಭಕ್ಕೆ ಬಂದಿದ್ದ ಭುಜಂಗ ಮಾಸ್ತರರು, ಊಟದ ನಂತರ ಬವಂತಿಯ ಜಗುಲಿ ಮೇಲಿನ ತಳಿಯ ಬಾಗಿಲಿಗೆ ಒರಗಿ ಕುಳಿತು ಬೀಡಿ ಹಚ್ಚಿದರು. ಸಣಕಲು ದೇಹ ವಯಸ್ಸು ಸುಮಾರು 60 ಇರಬೇಕು. ಮನಸ್ಸು ಮಾತ್ರ ಮಗುವಿನಂತದ್ದು, ಕೀರು ದನಿ, ಒಬ್ಬರಿಗೂ ಗಟ್ಟಿ ಮತಾಡಿ ಗೊತ್ತಿಲ್ಲ. ಅವರು ಮಾಸ್ತರರಾಗಿ ನಿವೃತ್ತಿಯಾಗುವವರೆಗೂ ಒಬ್ಬೇ ಒಬ್ಬ ಶಿಷ್ಯನಿಗೂ ಹೊಡೆದಿರಲಿಲ್ಲವಂತೆ. ಅವರು ಹಾಗೆ ಒಂದೊಂದು ದಮ್ಮು ಎಳೆದು ಬಿಡುತ್ತಿದ್ದ ಹೊಗೆ ತಳಿಯ ಕಂಬಗಳನ್ನು ಬಳಸಿ ಹೊರನಡೆಯುತ್ತಿತ್ತು. ಹಾಗೆ ಒಂದು ನಿಮಿಷ ಮುಂಡಗಿ ಕಂಬಕ್ಕೆ ಒರಗಿ ನೋಡುತ್ತಾ ಇದ್ದೆ. ಒಮ್ಮೆ ಗಟ್ಟಿ ಮನಸ್ಸು ಮಾಡಿ ಅವರ ಹತ್ತಿರ ಹೋಗಿ "ಬೀಡಿ ಎಳೆಯುವಾಗ ಉಸಿರನ್ನು ಒಳಗೆ ಎಳೆಯಬೇಕೋ ಹೊರಗೆ ಬಿಡಬೇಕೋ" ಅಂತ ಕೇಳಿಯೇ ಬಿಟ್ಟೆ. ಪಾಪದ ಮಾಸ್ತರರಾದ್ದರಿಂದ ನಂಗೆ ಒಂದು ಮಾತನ್ನೂ ಬೈಯ್ಯದೇ ಪ್ರಾತ್ಯಕ್ಷಿಕೆ ಸಮೇತ ಬೀಡಿ ಸೇದುವ ವಿಧಾನ ವಿವರಿಸಿದರು. ಆದರೇ ನನಗೆ ಅದನ್ನು ಪ್ರಯೋಗ ಮಾಡದ ಹೊರತು ಸಮಾಧಾನ ಇರಲಿಲ್ಲ.

ಅಂಗಳ ಹೆಬ್ಬಾಗಿಲು ದಾಟಿ ನಮ್ಮ ಮನೆ ಹೊಕ್ಕಿದೊಡನೆ ಸಿಗುವುದೇ ಆಯತಾಕಾರದ ದೊಡ್ಡ ಬವಂತಿ. ಅದರ ಮೂರು ಪಾರ್ಶ್ವದಲ್ಲಿ ಒಂದಡಿ ಎತ್ತರದ ಜಗುಲಿ. ಜಗುಲಿಗೆ ಬಳಸಿದಂತೆ ಬೃಹದಾಕಾರದ ಎಂಟು ಮುಂಡಗಿ ಕಂಬಗಳು. ಮಧ್ಯದಲ್ಲಿ ಪ್ರಧಾನ ಬಾಗಿಲು. ಪ್ರಧಾನ ಬಾಗಿಲ ಮೇಲೆ ಒಂದೆರಡು ದೇವರ ಫೋಟೊ. ಬಲಗಡೆ ಅಜ್ಜಯ್ಯನ ಹಳೆಯ ಎರಡು ಆರಾಮ ಕುರ್ಚಿಗಳು ಮತ್ತು ಹೊಸದಾಗಿ ಮಾಡಿಸಿದ ಒಂದು ಸ್ಟೂಲು.

ಮಧ್ಯಾಹ್ನದಿಂದ ಒಂದು ಬೀಡಿ ನನ್ನ ಚಡ್ಡಿ ಕಿಸೆಯಲ್ಲೇ ಇತ್ತು, ಆಗಾಗ ಅದನ್ನ ಮುಟ್ಟಿ ನೋಡಿಕೊಳ್ತಾ ಸರಿಯಾದ ಸಮಯಕ್ಕಾಗಿ ಕಾಯ್ತಾ ಇದ್ದೆ . ಸಂಜೆ ಆಗುವಷ್ಟರಲ್ಲಿ ಬಂದ ನೆಂಟರೆಲ್ಲಾ ಜಾಗ ಖಾಲಿ ಮಾಡಿದ್ದರು. ಆಗಿನ್ನೂ ನಮ್ಮ ಮನೆಗೆ ಕರೆಂಟು ಬಂದಿರಲಿಲ್ಲ. ಬವಂತಿಯ ಮಧ್ಯದಲ್ಲಿ ನೇತುಹಾಕಿದ್ದ ಲಾಟೀನಿನ ಮಬ್ಬು ಬೆಳಕು, ಬವಂತಿಯನ್ನು ಅಸ್ಪಷ್ಟವಾಗಿ ತೋರಿಸುತ್ತಿತ್ತು. ಮನೆಯವರೆಲ್ಲಾ ಒಳಗೆ ಹಿತ್ತಲಕಡೆಯಲ್ಲಿ ಇದ್ದರು. ಬವಂತಿ ನಿರ್ಜನವಾಗಿತ್ತು. ನಾನು ಎರಡು ಆರಾಮ ಕುರ್ಚಿಗಳ ನಡುವೆ ಜಾಗ ಮಾಡಿಕೊಂಡು ಚಡ್ಡಿಯಲ್ಲಿದ್ದ ಬೀಡಿ ತೆಗೆದು ಹೊತ್ತಿಸಿದೆ, ಭುಜಂಗ ಮಾಸ್ತರರ ನೆನೆಯುತ್ತಾ ಒಂದು ದಮ್ಮು ಎಳೆಯುವಷ್ಟರಲ್ಲಿ ಪ್ರಧಾನ ಬಾಗಿಲಿಂದ ಯಶೋದತ್ತೆ ಹೊರಗೆ ಬಂದಳು. ಆ ಮಬ್ಬು ಬೆಳಕಿನಲ್ಲಿ ಬೀಡಿಯ ಬೆಂಕಿ ಸ್ಪಷ್ಟವಾಗಿ ಕಾಣುತ್ತಿತ್ತು. "ಯಾರದು?" ಎಂದಳು. ನಾನು ಬೀಡಿಯನ್ನು ನೆಲಕ್ಕೆ ಎಸೆದೆ. ಹತ್ತಿರ ಬಂದು "ಗುರು ಬೀಡಿ ಸೇದುತ್ತಾ ಇದ್ಯಾ?" ಅಂತ ಕೇಳಿದಳು. ನಾನು ಉತ್ತರಿಸಬೇಕಾದ ಅಗತ್ಯ ಇರಲಿಲ್ಲ. ನಾನು ಬೀಡಿಗೆ ಬೆಂಕಿ ಹಚ್ಚಿದ್ದು, ಮನೆಮಂದಿಗೆಲ್ಲಾ ಕಾಡ್ಗಿಚ್ಚಿನಂತೆ ಹಬ್ಬಿ ನಂತರ ಅದೇ ಮಾಮೂಲು ನುಕ್ಕಿ ಬಡ್ರು, ಪರಂಗಿಮಣೆ. ಇದು ಬೀಡಿಗಿಂತ ಏನೂ ವಿಶೇಷ ಅಲ್ಲ ಬಿಡಿ.

6 comments:

Sushrutha Dodderi said...

ಹಹ್ಹ, ನಾನು ಮೊದಲ ಬೀಡಿ ಸೇದಿದ್ದು ನೆನಪಾಯ್ತು.

ಅಂದಹಾಗೆ, 'ಇದು ಬೀಡಿಗಿಂತ ದೊಡ್ಡದಲ್ಲ ಬಿಡಿ' ಅಂದದ್ದು ಭಾಳಾ ಚನಾಗಿದೆ.

ಶ್ರೀನಿಧಿ.ಡಿ.ಎಸ್ said...

ಜೈ ಗಣೇಶಾ!!

ಗುಹೆ said...

@ಸುಶ್ರುತ

ಅಂದಹಾಗೆ ನೇನು ಯಾವಾಗ ಬೀಡಿ ಸೇದಿದ್ದು?
ನೀನು ಬರದ್ರೆ ತುಂಬಾ ಚೆನ್ನಾಗಿ ಇರ್ತು..

Anonymous said...

ಹ್ಹ ಹ್ಹ. ಗುರು. ಸೇದೋದು ಸೇದಿದೆ. ಸರಿಯಾದ ಜಾಗ ನೋಡ್ಕಂಡು ಸೇದಕ್ಕಾಗ್ಲಿಲ್ವೇನೋ..... :)
ಚಿಕ್ಕ ವಯಸ್ಸಲ್ವಾ, ಏನೋ ಗೊತ್ತಾಗ್ಲಿಲ್ಲೆನೋ ಪಾಪ.. ಹೋಗ್ಲಿ ಬಿಡು....

ಅದಿರ್ಲಿ... ಈ ನುಕ್ಕಿ ಬುಡ್ರು, ಪರಂಗಿ ಮಣೆ ಅಂದ್ರೆ ಎಂತ ಹೇಳೋ..

Anonymous said...

humm....
iga nevu cigret sedudu tapilla
chikka vayasinda ne smoking ge inspire agidri

AnonJana said...

hehehe I wish I too had such an interesting story to recall, superb.